ಜೈ ಕಾಳಿ ಎನ್ನುತ್ತ ಹೃದಯ ರತ್ನಾಕರನ

Category: ಶ್ರೀಮಹಾಕಾಳಿ

Author: ವಚನವೇದ

ಜೈ ಕಾಳಿ ಎನ್ನುತ್ತ ಹೃದಯ ರತ್ನಾಕರನ
ಅಗಾಧ ಆಳಕ್ಕೆ ಮುಳುಗು ಮನವೇ ||

ಮೊದಲೆರಡು ಸಲ ನೀನು ವಿಫಲನಾದರೆ ಒಳಗೆ
ಬರಿ ಶೂನ್ಯವೆಂದಿದನು ತೆಗಳಬೇಡ |
ದೃಢಮನದ ಸಂಯಮದಿ ಕುಲಕುಂಡಲಿನಿ
ಕೂಲದೊಳಗಿಳಿದು ಅನುಭವವ ಪಡೆದು ನೋಡ ||

ಜ್ಞಾನಸಾಗರದೊಳಗೆ ಶಾಂತಿಮುಕ್ತಾಫಲದ
ಭಂಡಾರವಿದೆ ಹೋಗು ಅದನು ಗಳಿಸು |
ಆಹಾರಲೋಭದಲಿ ಅಲೆವ ಅರಿವರ್ಗಗಳ
ವಿವೇಕಲೇಪನದಿ ದೂರಗೊಳಿಸು॥

ರಾಮಪ್ರಸಾದನನು ಕೇಳು ಹೇಳುವನವನು
ಅಂತರಂಗದೊಳಿರುವ ಅನಂತ ರತ್ನವನು
ಮುಳುಗಿ ಮೇಲಕೆ ತಂದು ನೀನು ಧರಿಸು ||