ಶ್ರೀಘನಶ್ಯಾಮೆಯ ಚರಣಾಕಾಶದಿ
Category: ಶ್ರೀದೇವಿ
Author: ವಚನವೇದ
ಶ್ರೀಘನಶ್ಯಾಮೆಯ ಚರಣಾಕಾಶದಿ ಗಾಳಿಪಟದಿ ತೆರದಿ
ಹಾರುತಿರಲು ಮನ ದುರಿತ ಕಲುಷಗಳ ಬಿರುಗಾಳಿಯು ಭರದಿ || ಅಮ್ಮಾ
ಬೀಸಿ ಪಟವ ಈ ತಿರೆಗೆ ತಳ್ಳಿತೋ ಮತ್ತೆ ಏರದಂತೆ
ಸತಿ ಸುತ ವ್ಯಾಮೋಹದ ಮಾಯೆಗೆ ಸಿಕ್ಕಿ ಹರಿಯುವಂತೆ || ಅಮ್ಮಾ
ಮನದ ಪಟದ ಜ್ಞಾನಮುಂಡವೇ ಮುರಿಯಲಿಳೆಗೆ ಬಿತ್ತು
ಶ್ರದ್ಧೆಯ ಸೂತ್ರವ ಹಿಡಿದಿದ್ದರೂ ಪಟ ಅರಿವರ್ಗದಿ ನಮೆದಾಯ್ತು || ಅಮ್ಮಾ
ಇಂಥ ಪಟವ ನಾ ಹಾರಾಟಕೆ ಬಿಡದಿದ್ದರೆ ಒಳಿತಾಗಿತ್ತು
ಎಂದು ನುಡಿವನೀ ನರೇಶಚಂದ್ರನು ನೋವಿನಲ್ಲಿ ನಮೆದು || ಅಮ್ಮಾ