ಅಂತರಾಳವನಳೆವ ಕಂಗಳ
Category: ಶ್ರೀರಾಮಕೃಷ್ಣ
Author: ಹೆಚ್ ಎನ್ ಮುರಳೀಧರ
ಅಂತರಾಳವನಳೆವ ಕಂಗಳ
ಎದೆಯ ಕತ್ತಲ ಕಳೆವ ತಿಂಗಳ
ಮುಖದಿ ಶೋಭಿಪ ಹಾಸವು |
ದಿವ್ಯ ವದನದಿ ಪ್ರಭೆಯ ಹೊಮ್ಮಿಸಿ
ಭವ್ಯ ಸದನಕೆ ಪಥವ ನಿರ್ಮಿಸಿ
ಅರಳಿತಿಹುದು ನಿತ್ಯವೂ ||
ವರುಷ ವರುಷದ ತೀವ್ರ ಸಾಧನೆ-
ಯಿಂದ ಚಿಮ್ಮಿದ ಮಿಂಚಿದು ।
'ತಾಯಿ ತಾಯೀ' ಎಂದು ಅಳಲುತ
ಕೊನೆಗೆ ಪಡೆದಿಹ ಫಲವಿದು ||
ಮಾತೆ ಸೀತೆಯ ಮುಖದ ನಗೆನಿಧಿ
ಬಂದು ನೆಲೆಸಿಹುದಿಲ್ಲಿಗೆ |
ನೂರು ಸಾಸಿರ ದಳವನರಳಿಸಿ
ಕಂಪ ಬೀರುವ ಮಲ್ಲಿಗೆ ||