ರಾಮಕೃಷ್ಣದಿಗಂತದಲಿ
Category: ಶ್ರೀಸ್ವಾಮಿ ವಿವೇಕಾನಂದ
Author: ಹೆಚ್ ಎನ್ ಮುರಳೀಧರ
ರಾಮಕೃಷ್ಣದಿಗಂತದಲಿ
ಅರುಣಕಿರಣ ಹೊಮ್ಮಲು
ಮೂಡಿಬಂದ ತ್ಯಾಗರವಿಯೆ
ಬೆಳಕ ಹರಡಿ ಸುತ್ತಲು |
ಗುರುವಿನಡಿಯೆ ಮಲ್ಲಸಾಲೆ-
ಶಿಲೆಯು ಶಿಲ್ಪವಾಯಿತು;
ನೂರು ಪ್ರಶ್ನೆ ಕರಗಿ ಉರಿದು
ಜ್ಯೋತಿ ಜಗವ ತುಂಬಿತು |
ಉತ್ಸವರಥವೇರಿ ಜಗವ
ಸುತ್ತಿಬಂದ ಸ್ಫೂರ್ತಿಯೇ;
ಶ್ರೀಗುರುವಿನ ಧವಳಕೀರ್ತಿ-
ಧ್ವಜವ ಮೆರೆದ ಮೂರ್ತಿಯೆ |
ಎನ್ನೆದೆಯೊಳು ಉದಯಿಸಿಂದು,
ಕಾಳರಾತ್ರಿ ಕಳೆಯಲಿ;
ಕಿರಣಜಲದಿ ಜೀವ ನೆನೆದು
ಪುಳಕಾಂಕುರ ಬೆಳೆಯಲಿ |