ಆಡ ಪೊಗೊಣ ಬಾರೊ ರಂಗ

Category: ಶ್ರೀಕೃಷ್ಣ

Author: ಶ್ರೀಪಾದರಾಜಸ್ವಾಮಿ

ಆಡ ಪೊಗೊಣ ಬಾರೊ ರಂಗ
ಕೂಡಿ ಯಮುನಾ ತೀರದಲ್ಲಿ ||ಪ||

ಚಿಣ್ಣಿಕೋಲು ಚೆಂಡು ಬುಗರಿ
ಸಣ್ಣ ಸಣ್ಣ ಆಟಗಳನು
ಕಣ್ಣಮುಚ್ಚಲಿಕೆ ಕುಂಟಲಿಪಿ
ಬಣ್ಣ ಬಣ್ಣದ ಆಟಗಳನು || 1 ||

ಜಾಹ್ನವಿಯ ತೀರವಂತೆ
ಜನಕರಾಜನ ಕುವರಿಯಂತೆ
ಜಾನಕಿಯ ವಿವಾಹವಂತೆ
ಜಾಣ ನೀನು ಬರಬೇಕಂತೆ || 2 ||

ಪುಂಡರೀಯ ನಗರವಂತೆ
ಭೀಷ್ಮಕರಾಜನ ಕುವರಿಯಂತೆ
ಶಿಶುಪಾಲನ್ನ ಒಲ್ಲಳಂತೆ
ನಿಮಗೆ ಓಲೆ ಬರೆದಳಂತೆ || 3 ||

ಕೌರವರು ಪಾಂಡವರು
ಲೆತ್ತವಾಡಿ ಸೋತರಂತೆ
ರಾಜ್ಯವನ್ನು ಬಿಟ್ಟರಂತೆ
ರಂಗವಿಠಲ ಬರಬೇಕಂತೆ || 4 ||