ಎಂತಾದರೂ ಚಿಂತೆ ಬಿಡದು

Category: ಶ್ರೀಕೃಷ್ಣ

Author: ಪುರಂದರದಾಸ

ಎಂತಾದರೂ ಚಿಂತೆ ಬಿಡದು |
ನಿಶ್ಚಿಂತರಾದವರ ನಾನೊಬ್ಬರನು ಕಾಣೆ ||

ಬ್ರಹ್ಮನಿಗೆ ಶಿರವೊಂದು ಭಿನ್ನವಾದ ಚಿಂತೆ
ರಕ್ಕಸರ ಗುರುವಿಗೆ ಕಣ್ಣಿಲ್ಲದ ಚಿಂತೆ |
ಮನ್ಮಥಗೆ ತನುಸುಟ್ಟು ಭಸ್ಮವಾದ ಚಿಂತೆ
ಮುಕ್ಕಣ್ಣ ಶಿವನಿಗೆ ತಿರಿದುಂಬೊ ಚಿಂತೆ ||

ಧರ್ಮನಿಷ್ಠರಿಗೆ ಸುಖದೊಳಿರುವ ಚಿಂತೆ
ದುಷ್ಕರ್ಮಿಗಳಿಗೆ ಪರರ ಕೆಡಿಸುವ ಚಿಂತೆ |
ತಮ್ಮಅರ್ಜುನಗೆ ವೈರಿಯ ಕೊಲ್ಲುವ ಚಿಂತೆ
ಅಣ್ಣ ಭೀಮನಿಗೆ ಅನ್ನ ಸಾಲದ ಚಿಂತೆ ||

ಭಕ್ತರಿಗೆ ಗುರುವಿನಲಿ ಮುಕ್ತಿ ಪಡೆಯುವ ಚಿಂತೆ
ಮುಕ್ತರಿಗೆ ಅನುಕ್ಷಣವು ಹರಿದರ್ಶನದ ಚಿಂತೆ |
ಯುಕ್ತಿ ಬಲ್ಲವರಿಗೆ ತತ್ತ್ವ ಹೇಳುವ ಚಿಂತೆ
ಶಕ್ತ ಪುರಂದರವಿಟ್ಠಲಗೆಮ್ಮ ಸಲಹುವ ಚಿಂತೆ ||