ಅನ್ಯಚಿಂತೆಯ ಪಥದಿ
Category: ಶ್ರೀಗುರು
Author: ವಚನವೇದ
ಅನ್ಯಚಿಂತೆಯ ಪಥದಿ ಮನವಲೆದು ಸಾಗಿರಲು
ನಿನ್ನ ದರ್ಶನ ನನ್ನ ನಾಚಿಸಿಹುದು ||
ಜೀವನದ ಜಲಧಿಯಲಿ ಪಯಣಗೈಯುವ ನನಗೆ
ನೀನೊಂದು ಧ್ರುವತಾರೆ ನನ್ನ ಗುರುವೆ |
ಕಡೆಯಿಲ್ಲದೀ ಕಡಲ ಬಳಸುದಾರಿಯೊಳಾನು
ದಿಕ್ಕು ತಪ್ಪದೆ ಇನ್ನು ಪಯಣಗೈವೆ ||
ಇಲ್ಲಿ ನಾನಲೆವಾಗ ಎಂದಾದರೂ ನನ್ನ
ಎದೆಯು ಮಿಡುಕಾಡುತಿರೆ ನೋವಿನಲ್ಲಿ |
ಮೇಲೆ ನಿನ್ನಯ ಕರುಣಕಾಂತಿಯುಜ್ವಲ ತಾರೆ
ಬೆಳಗಿ ಸಂತೈಸುವುದು ಹಾದಿಯಲ್ಲಿ ||
ನನ್ನಂತರಂಗದಲಿ ನಿನ್ನ ಮುಖವೆಂದಿಗೂ
ಚಿರಮಧುರ ಕಾಂತಿಯಲಿ ಶೋಭಿಸಿಹುದು |
ಒಂದೆ ಚಣ ನಾ ನಿನ್ನ ಕಾಣದಿದ್ದರೆ ಎದೆಯು
ಅತುಲ ವೇದನೆಯಲ್ಲಿ ತುಡಿಯುತಿಹುದು ||