ಏನು ಮಾಡಿದರೇನು

Category: ಶ್ರೀಕೃಷ್ಣ

Author: ಪುರಂದರದಾಸ

ಏನು ಮಾಡಿದರೇನು ಭವ ಹಿಂಗದು ಸ್ವಾಮಿ
ದಾನವಾಂತಕ ನಿನ್ನ ದಯವಾಗದನಕ ||

ಅರುಣೋದಯದೊಳೆದ್ದು ಅತಿಸ್ನಾನಗಳ ಮಾಡಿ
ಬೆರಳೆಣಿಸಿದೆ ಅದರ ನಿಜವರಿಯದೆ |
ಚರಣ ಸಾಷ್ಟಾಂಗವನು ಮಾಡಿ ನಾ ದಣಿದೆನೋ
ಹರಿ ನಿನ್ನ ಕರುಣಾಕಟಾಕ್ಷವಾಗದನಕ ||

ಶ್ರುತಿ ಶಾಸ್ತ್ರ ಪುರಾಣಗಳನೋದಿ ಬೆಂಡಾದೆ
ಅತಿ ಶೀಲಗಳನೆಲ್ಲ ಮಾಡಿ ದಣಿದೆ |
ಗತಿಯ ಪಡೆಯುವೆನೆಂದು ಕಾಯ ದಂಡಿಸಿದೆನೋ
ರತಿಪತಿಪಿತ ನಿನ್ನ ದಯವಾಗದನಕ ||

ಧ್ಯಾನವನು ಮಾಡಿದೆನು ಮೌನವನು ತಾಳಿದೆ
ಮಹಾನು ಪುರುಷಾರ್ಥಕ್ಕೆ ಮನವನಿಕ್ಕಿ |
ಅನಾಥಬಂಧು ಶ್ರೀ ಪುರಂದರವಿಟ್ಠಲನ
ಧ್ಯಾನಿಸುವರೊಡಗೂಡಿ ನೆಲೆಗಾಣದನಕ ||