ಕರುಣಾಕರ ನೀನೆಂಬುವುದೇತಕೋ
Category: ಶ್ರೀಕೃಷ್ಣ
Author: ಪುರಂದರದಾಸ
ಕರುಣಾಕರ ನೀನೆಂಬುವುದೇತಕೋ
ಭರವಸೆಯಿಲ್ಲೆನಗೆ ||
ಪರಿಪರಿಯಲಿ ಈ ನರಜನ್ಮವನಿತ್ತು
ತಿರುಗಿ ತಿರುಗಿ ಮನಕರಗಿಸುವುದ ಕಂಡು ||
ಕರಿ ಧ್ರುವ ಬಲಿ ಪಾಂಚಾಲಿ ಅಹಲ್ಯೆಯ
ಪೊರೆದವ ನೀನಂತೆ |
ಅರಿತು ವಿಚಾರಿಸಿ ನೋಡಲದೆಲ್ಲವು
ಪರಿಪರಿ ಕಂತೆಗಳಂತಿವೆ ಕೃಷ್ಣಾ||
ಕರುಣಾಕರ ನೀನಾದರೆ ಈಗಲೆ
ಕರಪಿಡಿದೆನ್ನನು ಹರಿ ಕಾಯೋ |
ಸರಸಿಜಾಕ್ಷನೆ ಸರಸ ನೀನಾದರೆ
ದುರಿತಗಳೆನ್ನನು ಬಾಧಿಪುದುಂಟೆ ||
ಮರಣಕಾಲದಲಿ ಅಜಮಿಳಗೊಲಿದೆ
ಗರುಡಧ್ವಜನೆಂಬ ಬಿರುದಿನಿಂದ |
ವರಬಿರುದುಗಳು ಉಳಿಯಬೇಕಾದರೆ
ತ್ವರಿತದಿ ಕಾಯೋ ಪುರಂದರವಿಟ್ಠಲ ||