ಅಮ್ಮ ನಿಮ್ಮ ಮನೆಗಳಲ್ಲಿ

Category: ಶ್ರೀಕೃಷ್ಣ

Author: ಪುರಂದರದಾಸ

ಅಮ್ಮ ನಿಮ್ಮ ಮನೆಗಳಲ್ಲಿ ನಮ್ಮ ರಂಗನ ಕಾಣಿರೇನೆ ||

ಕಾಶಿ ಪೀತಾಂಬರ ಕೈಯಲಿ ಕೊಳಲು
ಪೂಸಿದ ಶ್ರೀಗಂಧ ಮೈಯೊಳಗಮ್ಮ
ಲೇಸಾಗಿ ತುಲಸಿಯ ಮಾಲೆಯ ಧರಿಸಿದ
ವಾಸುದೇವನು ಬಂದ ಕಾಣಿರೇನೆ ||

ಕರದಲಿ ಕಂಕಣ ಬೆರಳಲ್ಲಿ ಉಂಗುರ
ಕೊರಳಲ್ಲಿ ಧರಿಸಿದ ಹುಲಿಯುಗುರಮ್ಮ|
ಅರಳೆಲೆ ಕನಕಕುಂಡಲ ಕಾಲಲಂದುಗೆ
ಉರಗಶಯನ ಬಂದ ಕಾಣಿರೇನೆ ||

ಕಾಲಲಿ ಕಿರುಗೆಜ್ಜೆ ನೀಲದ ಬಾವುಲಿ
ನೀಲವರ್ಣನು ನಾಟ್ಯವಾಡುತಲಿ |
ಮೇಲಾಗಿ ಬಾಯಲ್ಲಿ ಜಗವನು ತೋರಿದ
ಮೂಲೋಕದೊಡೆಯನ ಕಾಣಿರೇನೆ ||

ಕುಂಕುಮ ಕಸ್ತೂರಿ ಕುಡಿಕುಡಿ ನಾಮವು
ಶಂಖಚಕ್ರಗಳ ಧರಿಸಿಹನಮ್ಮ
ಬಿಂಕದಿಂದಲಿ ಕೊಳಲೂದುತ್ತ ಪಾಡುತ್ತ
ಪಂಕಜಾಕ್ಷ ಬಂದ ಕಾಣಿರೇನೆ ||

ನೊಸಲ ಸುತ್ತಿದ ಪಟ್ಟ ನಡುವಿನ ವಡ್ಯಾಣ
ಎಸೆವ ಕಸ್ತೂರಿ ಬಟ್ಟು ಮೈಯವನಮ್ಮ|
ಪಸರಿಸಿ ಪಟ್ಟೆಯ ಹಾವಿಗೆ ಮೆಟ್ಟಿದ
ಅಸುರಾಂತಕ ಬಂದ ಕಾಣಿರೇನೆ ||

ತೆತ್ತೀಸಕೋಟಿ ದೇವತೆಗಳನೊಡಗೂಡಿ
ಹತ್ತವತಾರವನೆತ್ತಿದನೆ |
ಭಕ್ತವತ್ಸಲ ನಮ್ಮ ಪುರಂದರವಿಟ್ಠಲ
ನಿತ್ಯೋತ್ಸವ ಬಂದ ಕಾಣಿರೇನೆ ||