ಕರುಣಿಸೋ ರಂಗಾ

Category: ಶ್ರೀಕೃಷ್ಣ

Author: ಪುರಂದರದಾಸ

ಕರುಣಿಸೋ ರಂಗಾ ಕರುಣಿಸೋ |
ಹಗಲೂ ಇರುಳೂ ನಿನ್ನ ಸ್ಮರಣೆ ಮರೆಯದಂತೆ ||

ರುಕುಮಾಂಗದನಂತೆ ವ್ರತವ ನಾನರಿಯೆ
ಶುಕಮುನಿಯಂತೆ ಸ್ತುತಿಸಲರಿಯೆ |
ಬಕವೈರಿಯಂತೆ ಧ್ಯಾನ ಮಾಡಲರಿಯೆ
ದೇವಕಿಯಂತೆ ಮುದ್ದಿಸಲರಿಯೆನೋ ||

ಗರುಡನಂದದಿ ಪೊತ್ತು ತಿರುಗಲು ಅರಿಯೆ
ಕರೆಯಲರಿಯೆನೋ ಕರಿರಾಜನಂತೆ |
ವರಕಪಿಯಂತೆ ದಾಸ್ಯ ಮಾಡಲರಿಯೆ
ಸಿರಿಯಂತೆ ಸುಖವಿತ್ತು ಸೇವಿಸಲರಿಯೆನೋ ||

ಬಲಿಯಂತೆ ದಾನವ ಕೊಡಲಾರೆನೊ ಭಕ್ತಿ-
ಛಲವನರಿಯೆನೋ ಪ್ರಹ್ಲಾದನಂತೆ |
ಒಲಿಸಲರಿಯೆನೋ ಅರ್ಜುನನಂತೆ ಸಖನಾಗಿ
ಸಲಹೋ ದೇವರ ದೇವ ಪುರಂದರವಿಟ್ಠಲ ||