ಕಲಿಯುಗದಲಿ ಹರಿನಾಮವ
Category: ಶ್ರೀಕೃಷ್ಣ
Author: ಪುರಂದರದಾಸ
ಕಲಿಯುಗದಲಿ ಹರಿನಾಮವ ನೆನೆದರೆ
ಕುಲಕೋಟಿಗಳುದ್ದರಿಸುವವೋ ರಂಗಾ ||
ಸುಲಭದ ಮುಕ್ತಿಗೆ ಸುಲಭನೆಂದೆನಿಸುವ
ಜಲರುಹನಾಭನ ನೆನೆ ಮನವೆ ||
ಸ್ನಾನವನರಿಯೆನು ಮೌನವನರಿಯೆನು
ಧ್ಯಾನವನರಿಯೆನೆಂದೆನಬೇಡ |
ಜಾನಕಿವಲ್ಲಭ ದಶರಥನಂದನ
ಗಾನವಿನೋದನ ನೆನೆ ಮನವೆ ||
ಅರ್ಚಿಸಲರಿಯೆನು ಮೆಚ್ಚಿಸಲರಿಯೆನು
ತುಚ್ಚನು ನಾನೆಂದೆನಬೇಡ |
ಅಚ್ಯುತಾನಂತ ಗೋವಿಂದ ಮುಕುಂದನ
ಇಚ್ಛೆಯಿಂದ ನೀ ನೆನೆ ಮನವೆ ||
ಜಪವೊಂದರಿಯೆನು ತಪವೊಂದರಿಯೆನು
ಉಪದೇಶವಿಲ್ಲೆಂದೆನಬೇಡ |
ಅಪಾರ ಮಹಿಮ ಶ್ರೀ ಪುರಂದರವಿಟ್ಠಲನ
ಉಪಾಯದಿಂದಲಿ ನೆನೆ ಮನವೆ ||