ಕಂಡು ಕಂಡು ನೀ ಎನ್ನ
Category: ಶ್ರೀಕೃಷ್ಣ
Author: ಪುರಂದರದಾಸ
ಶಹನ* -
ಕಂಡು ಕಂಡು ನೀ ಎನ್ನ ಕೈ ಬಿಡುವರೇ ಕೃಷ್ಣ
ಪುಂಡರೀಕಾಕ್ಷ ಶ್ರೀಪುರುಷೋತ್ತಮ ದೇವ ||
ಬಂಧುಗಳು ಎನಗಿಲ್ಲ ಬದುಕಿನಲಿ ಸುಖವಿಲ್ಲ
ನಿಂದೆಯಲಿ ನೊಂದೆನಯ್ಯ ನೀರಜಾಕ್ಷ |
ಬಂಧು ಬಳಗವು ನೀ ತಂದೆತಾಯಿಯು ನೀನೆ
ಎಂದೆಂದಿಗೂ ನಿನ್ನ ನಂಬಿದೆನೋ ಶ್ರೀಹರಿಯೆ ||
ಮೋಹನ* -
ಕ್ಷಣವೊಂದು ಯುಗವಾಗಿ ತೃಣಕಿಂತ ಕಡೆಯಾಗಿ
ಎಣಿಸಲಾರದ ಭವದಿ ನೊಂದೆ ನಾನು |
ಸನಕಾದಿ ಮುನಿವಂದ್ಯ ವನಜಸಂಭವಜನಕ
ಫಣಿಶಾಯಿ ಪ್ರಹ್ಲಾದಗೊಲಿದ ಶ್ರೀಹರಿಯೆ ||
ಭೈರವೀ* -
ಭಕ್ತವತ್ಸಲನೆಂಬೊ ಬಿರುದು ಪೊತ್ತಮೇಲೆ
ಭಕ್ತರಾಧೀನನಾಗಿರಬೇಡವೆ |
ಮುಕ್ತಿದಾಯಕ ನಮ್ಮ ಪುರಂದರವಿಟ್ಠಲನೆ
ಶಕ್ತ ನೀನಹುದೆಂದು ನಂಬಿದೆನೋ ಶ್ರೀಹರಿಯೆ ||