ಕೆಳಗಿಳಿದು ಹರಿಯುವುದೆ

Category: ಶ್ರೀಕೃಷ್ಣ

Author: ಸ್ವಾಮಿ ಶಾಸ್ತ್ರಾನಂದ

ಕೆಳಗಿಳಿದು ಹರಿಯುವುದೆ ಜಲದ ನಿಜಗುಣವಯ್ಯ
ತಳೆಯುವುದು ಮಲಿನತೆಯ ಕೊಳೆನೆಲದಿ ಹರಿಯುತ್ತ |
ಜಲನಿಧಿಯ ಸೇರಿ ತಾ ಬಲು ಕ್ಷಾರವಾಗುತಲಿ
ಸಲಿಲಾರ್ಥಿ ಜನರಿಂಗೆ ಅನಲಸಮವಾಗುವುದು ||

ಗಗನದಲ್ಲಿಹ ರವಿಯು ಜಗವನೆಲ್ಲವ ಬೆಳಗಿ
ಸಗರಜಲವನು ಕೂಡ ನಗುತ ಕರದಿಂದೆತ್ತಿ|
ವಿಗತದೋಷವ ಗೈದು ಮುಗಿಲರೂಪವ ಕೊಡುತ
ಜಗಕೆಲ್ಲ ಸವಿತರುವ ಮಿಗೆ ಸೊಗದ ಮಳೆಕರೆವ ||

ಜಲದವೊಲು ಎಮ್ಮ ಮನ ಕೆಳಮೊಗವು ಚಂಚಲವು
ನಲಿನಲಿದು ಹರಿಯುವುದು ಮಲಿನಮಯ ವಿಷಯದೆಡೆ |
ಜಲಜಾಕ್ಷ ಕೃಪೆಯಿಂದ ಒಲಿದೆಮ್ಮ ಬಾಳ್ಗಳನು
ಜಲಮೂರ್ತಿ ಮೇಲೆತ್ತಿ ಸಲಹಯ್ಯ ಸ್ವಾಮಿ ||