ಕೊಟ್ಟವರು ಸರಿಯೆ
Category: ಶ್ರೀಕೃಷ್ಣ
Author: ಪುರಂದರದಾಸ
ಕೊಟ್ಟವರು ಸರಿಯೆ | ಕೊಡದೆ
ಬಿಟ್ಟವರು ಸರಿಯೆ ||
ಇಕ್ಕಿದವರಿಗುಂಟು | ಮದದಲಿ
ಸೊಕ್ಕಿದರೇನುಂಟು |
ರಕ್ಕಸಾಂತಕ ಲಕುಮಿಪತಿಯ ಮರೆ -
ಪೊಕ್ಕವರಾದ ಶಿಷ್ಟಭಕುತರಿಗೆ ||
ದೊರೆಯಾದರು ಸರಿಯೆ | ನಮಗೆ
ತಿರುಕನಾದರು ಸರಿಯೆ |
ಸರಸವಿರಸದಿಂ ನುಡಿದರೇನು ನರ -
ಹರಿಪದಕಮಲವ ನಿರುತ ಭಜಿಪರಿಗೆ ||
ಪುಟ್ಟಿಸಿದ ಪ್ರಭುವು | ನಮಗೆ
ಹೊಟ್ಟೆಗೆ ಕೊಡದಿಹನೆ |
ಬೆಟ್ಟದೊಡೆಯ ನಮ್ಮ ಪುರಂದರವಿಟ್ಠಲನ
ಗಟ್ಟಿಯಾಗಿ ನಂಬಿದ ಭಕುತರಿಗೆ ||