ಅಟ್ಟು ಇಕ್ಕದವರ ಮನೆಯ 

Category: ಶ್ರೀಕೃಷ್ಣ

Author: ಕನಕದಾಸ

ಅಟ್ಟು ಇಕ್ಕದವರ ಮನೆಯ ||ಪ||

ಅಟ್ಟು ಇಕ್ಕದವರ ಮನೆ ಪಾಯಸ ಕಜ್ಜಾಯವ
ಅಟ್ಟರೇನು ಅಡದಿದ್ದರೇನು ||ಅ||

ನಿಚ್ಚಣಿಗೆ - ದೋಟಿಗೆ ನಿಲುಕದ ಹಣ್ಣಿನ ವೃಕ್ಷ
ನಿಚ್ಚ ನಿಚ್ಚವು ಬಾಗಿ ಫಲವಾದರೇನು
ಔಚಿತ್ಯ ವಿದ್ಯೆಯನರಿಯದ ದೊರೆ ತಾನು
ಮೆಚ್ಚಿದರೇನು ಮೆಚ್ಚದಿದ್ದರೇನು ||1||

ದಾರಿದ್ರ್ಯಕ್ಕೊದಗದ ದ್ರವ್ಯ ಪದಾರ್ಥದ
ಏರಿ ಇದ್ದರೇನು ಪರ್ವತವಿದ್ದರೇನು
ಶರೀರ ಸೌಖ್ಯ ಶಮನಕ್ಕಾಗದ ಹೆಣ್ಣು
ಊರಲಿದ್ದರೇನು ತೌರೂರಲಿದ್ದರೇನು ||2||

ಉರಗಾದ್ರಿ ವಾಸ ನಾರಾಯಣಾದಿಕೇಶವನ
ಚರಣಕಮಲವನು ಸೇರಿಕೊಳ್ಳದೆ
ವರ-ಶಾಪವಿಲ್ಲದ ಬಣಗು ದೈವಗಳಿಗೆ
ಶರಣೆಂದರೇನು ಶರಣೆನದಿದ್ದರೇನು? ||3||