ಅರಿತು ನಡೆಯಲಿ ಬೇಕು

Category: ಶ್ರೀಕೃಷ್ಣ

Author: ಕನಕದಾಸ

ಅರಿತು ನಡೆಯಲಿ ಬೇಕು ನರಕಾಯವೆತ್ತಿದ ಮೇಲೆ
ಅರಿಯದಿದ್ದರೆ ನರಕವೇ ಪ್ರಾಪ್ತಿ

ದುರ್ಜನರ ಮನೆಯ ಪಾಯಸಾನ್ನಕಿಂತ
ಸಜ್ಜನರ ಮನೆಯ ರಬ್ಬಳಿಗೆ ಲೇಸು
ಹೆಜ್ಜೆಗೆ ಸಾವಿರ ಹೊನ್ನನಿತ್ತರೂ ಬೇಡ - ಬಲು
ದುರ್ಜನರ ಸಂಗ ಬಲು ಭಂಗ ಹರಿಯೆ ||1||

ಭಕ್ತಿಹೀನರ ಮನೆಯ ಪಟ್ಟು ಸುಪ್ಪತ್ತಿಗೆಗಿಂತ
ಭಕ್ತರ ಮನೆಯ ಕಡೆಬಾಗಿಲ ಕಾಯುವುದು ಲೇಸು
ಮುಕ್ತಿಮಾರ್ಗವ ತೋರ್ಪ ಮುರಹರನ ದಾಸರನು
ಸಕ್ತಿಯಿಂ ಸೇವಿಸುವುದು ಬಲು ಸೌಖ್ಯ ಹರಿಯೆ ||2||

ಆಶೆಕಾರರ ಮನೆಯ ವಿಲಾಸ ಸುಖಕಿಂತ
ಆಶಾರಹಿತರ ಮನೆಯ ನಿರ್ಗತಿಕ ದೈನ್ಯ ಲೇಸು
ಭೂಸುರಪ್ರಿಯ ಕಾಗಿನೆಲೆಯಾದಿಕೇಶವನ
ಮೀಸಲಿನ ಪಾದಭಜನೆ ಕಡುಲೇಸು ಮನವೆ ||3||