ಅರಿತು ಭಜಿಪರ್ಯಾರಯ್ಯ ರಂಗಯ್ಯ

Category: ಶ್ರೀಕೃಷ್ಣ

Author: ಕನಕದಾಸ

ಅರಿತು ಭಜಿಪರ್ಯಾರಯ್ಯ ರಂಗಯ್ಯ ನಿನ್ನ ||ಪ||

ಸಿರಿದೇವಿಯು ಕಿರಿಬೆರಳಲ್ಲಿರುವ ಸೊಬಗನ್ನು
ಅರಿಯಲಾರಳೊ ದೇವ ||ಅ||

ಇಂದಿರಾದೇವಿಯು ಅರಿಯಲಾರಳು ದೇವ
ಬೃಂದಾರಕರೆಲ್ಲ ನಿಂದು ಯೋಚಿಪರು
ನಂದ ತೀರ್ಥರ ಮತದೊಳಗೆ ಬಂದವರೆಲ್ಲ
ಎಂದಿಗಾದರು ಪರಮಾನಂದ ಪೊಂದುವರು ||1||

ಮಾನವರು ಹೀನಮಾರ್ಗದೊಳು ಮುಳುಗಿಹರು
ಜ್ಞಾನಿಗಳು ನಿಂದು ಧ್ಯಾನಿಪರು ನಿನ್ನ
ನೀನೆ ದಯಮಾಡಿ ಸಲಹೊ ಎನ್ನನು ಕೃಷ್ಣ
ಕಾನನದೊಳು ಕಣ್ಣುಮುಚ್ಚಿ ಬಿಟ್ಟಿಹರೊ ||2||

ಜಲದೊಳಗಿನ ಕಪ್ಪೆ ಜಲದ ಸವಿಯರಿಯದು
ಜಲದ ಸುಗಂಧವ ಜಲವರಿಯದು
ನೆಲೆಯ ಕಂಡವರ್ಯಾರು ನೆಲೆಯಾದಿಕೇಶವನೆ
ಸುಲಲಿತ ತತ್ತ್ವವನು ಸುಲಭ ಮಾರ್ಗದಿ ತೋರೊ ||3||