ಅಹುದಾದರಹುದೆನ್ನಿ ಅಲ್ಲವಾದರಲ್ಲವೆನ್ನಿ
Category: ಇತರೆ
Author: ಕನಕದಾಸ
ಅಹುದಾದರಹುದೆನ್ನಿ ಅಲ್ಲವಾದರಲ್ಲವೆನ್ನಿ ||ಪ||
ಬಹುಜನರು ನೆರೆ ತಿಳಿದು ಪೇಳಿ ಮತ್ತಿದನು ||ಅ||
ದೇವರಿಲ್ಲದ ಗುಡಿಯ ಪಾಳು ಬಿದ್ದಂಗಡಿಯು
ಭಾವವಿಲ್ಲದ ಭಕುತಿ ಅದು ಕುಹಕ ಯುಕುತಿ
ಹೇವವಿಲ್ಲದ ಹೆಣ್ಣು ಗಜುಗ ಬೆಳೆದ ಕಣ್ಣು
ಸೇವೆಯರಿಯದ ದಣಿಯು ಕಲ್ಲಿನಾ ಕಣಿಯು ||1||
ಧರ್ಮವಿಲ್ಲದ ಅರಸು ಮುರಿದ ಕಾಲಿನ ಹೊರಸು
ನಿರ್ಮಲಿಲ್ಲದ ಮನಸು ಅದು ಕಜ್ಜಿ ತಿನಿಸು
ಶರ್ಮವಿಲ್ಲದ ಗಂಡು ಕರಿಯ ಒನಕೆಯ ತುಂಡು
ಮರ್ಮವಿಲ್ಲದ ಮಾತು ಒಡಕು ಮಡಕೆ ತೂತು ||2||
ಮಕ್ಕಳಿಲ್ಲದ ಸಿರಿಯು ಕೊಳೆತ ತೆಂಗಿನ ತುರಿಯು
ಸೌಖ್ಯವಿಲ್ಲದ ಊಟ ಅದು ಕಾಳಕೂಟ
ಒಕ್ಕಲಿಲ್ಲದ ಊರು ಕೊಳೆತು ನಾರುವ ನೀರು
ಸೊಕ್ಕಿನಡೆಯುವ ಭೃತ್ಯ ಅವ ಕ್ರೂರ ಕೃತ್ಯ ||3||
ಕಂಡು ಕರೆಯದ ನೆಂಟ ಮೊನೆಯು ಕೆಟ್ಟಿಹ ಕಂಟ
ಉಂಡು ನಗದಿಹ ಮೋರೆ ಅದು ಕಹಿಯ ಸೋರೆ
ದಂಡಿಗಂಜುವ ಬಂಟ ಒಡಕು ಹರವಿಯ ಕಂಠ
ಗಂಡಗಂಜದ ನಾರಿ ಅವಳೆ ಹೆಮ್ಮಾರಿ ||4||
ಬಿಟ್ಟು ನಡೆಯುವ ಗೆಣೆಯು ಹರಕು ತೊಗಲಿನ ಮಿಣಿಯು
ಕೊಟ್ಟು ಪೇಳುವ ದಾತ ಅವ ಹೀನ ಜಾತ
ಸೃಷ್ಟಿಯೊಳು ಕಾಗಿನೆಲೆಯಾದಿಕೇಶವನಂಘ್ರಿ
ಮುಟ್ಟಿ ಭಜಿಸದ ನರನು ಅವನೆ ವಾನರನು ||5||