ಆ ವೇಳೆಯಲಿ ಆರಾರ ಕಾಯ್ದೆಯೊ ದೇವ
Category: ಶ್ರೀಕೃಷ್ಣ
Author: ಕನಕದಾಸ
ಆ ವೇಳೆಯಲಿ ಆರಾರ ಕಾಯ್ದೆಯೊ ದೇವ
ಈ ವೇಳೆಯಲಿ ಎನ್ನ ಕಾಯ್ದರದು ನಿಜವಹುದು ||ಪ||
ಕರೆಯೆ ಕಂಬದಿ ಬಂದು ಹಿರಣ್ಯಕಶಿಪುವ ಕೊಂದೆ
ಶರಣನನು ಪಾಲಿಸುತೆ ಕಾಯ್ದೆಯಂತೆ
ಕರಿರಾಜ ಹರಿಯೆಂದು ಕರೆಯಲಾಕ್ಷಣ ಬಂದು
ಕರುಣದಿಂದಲಿ ಕಾಯ್ದೆಯಂತೆ ಹರಿಯೆ ||1||
ಧರೆಗಧಿಕನಾಥನಾ ತೊಡೆಯನೇರಲು ಕಂಡು
ಜರೆಯಲಾ ಧ್ರುವನ ನೀ ಕಾಯ್ದೆಯಂತೆ
ದುರುಳ ದುಃಶಾಸನ ದ್ರೌಪದಿಯ ಸೀರೆಯ ಸೆಳೆಯೆ
ತರುಣಿಗಕ್ಷಯವಿತ್ತು ಕಾಯ್ದೆಯಂತೆ ಹರಿಯೆ ||2||
ಅಂದು ರಾವಣ ವಿಭೀಷಣನ ನೂಕಲು ಕಂಡು
ಇಂದಿರಾರಮಣ ನೀ ಕಾಯ್ದೆಯಂತೆ
ಮಂದರೋದ್ಧರ ಮಧುಸೂದನ ಮಾಧವ ಗೋ
ವಿಂದ ರಕ್ಷಿಸು ಬಾಡದಾದಿಕೇಶವರಾಯ ||3|