ಆನೆ ಬರುತಾದೆ ನೋಡಮ್ಮ ಮದ್ದಾನೆ ಬರುತಾದೆ
Category: ಶ್ರೀಕೃಷ್ಣ
Author: ಕನಕದಾಸ
ಆನೆ ಬರುತಾದೆ ನೋಡಮ್ಮ ಮದ್ದಾನೆ ಬರುತಾದೆ ||ಪ||
ಆನೆ ಬರುತಾದೆ ಎಲ್ಲರು ನೋಡಿರಿ ಒಂ
ದಾನೆಯ ಕೊಂದ ಮದ್ದಾನೆ
ಏನೆಂದು ಪೇಳಲಿ ಎಲ್ಲ ದಿಕ್ಕುಗಳಲಿ
ತಾನೇ ತಾನಾಗಿ ಮದ ಸೊಕ್ಕಿದಾನೆ ||ಅ||
ನೀರ ಮುಳುಗಿ ಖಳನ ಕೊಂದು ವೇದ ತಂದು
ಬರಮದೇವಗಿತ್ತ ಮದ್ದಾನೆ
ಕ್ರೂರ ಚಿತ್ರಗುಪ್ತನೊಡನೆ ಕಾರುಬಾರಿಗಿಳಿದ
ಜಾರ ಕೃಷ್ಣನೆಂಬ ಸೊಕ್ಕಿದಾನೆ ||1||
ದಶದಿಕ್ಕಿನೊಳು ಘಂಟೆ ಘಣಿರೆಂದು ಬರುತ್ತಿದೆ
ಕುಸುಮಶರನ ಪೆತ್ತ ಮದ್ದಾನೆ
ದಶಕಂಠನ ಕೊಂದು ಅನುಜಗೆ ಪಟ್ಟಗಟ್ಟಿದ
ದಶರಥಸುತನೆಂಬ ಮದ ಸೊಕ್ಕಿದಾನೆ ||2||
ಗಂಧ ಕಸ್ತೂರಿ ಬೊಟ್ಟು ಗಮಕದಿಂದಲಿ ಇಟ್ಟು
ಗೊಂದಲಗಡಿಬಿಡಿ ಸುರಲೋಕ ಅಮ್ಮಮ್ಮ
ಬೆಂಬಿಡದೆ ದೈತ್ಯರನು ಕೊಂದ ಗುಣ ಸಂಪನ್ನ
ಸುಂದರ ಕೃಷ್ಣನೆಂಬ ಮದ ಸೊಕ್ಕಿದಾನೆ ||3||
ಸಾವಿರ ತೋಳವನ ಸರಸದಿಂದಲಿ ಕಡಿದ
ಭುವನ ರಕ್ಷಕನಾದ ಮದ್ದಾನೆ
ಯೌವನದ ಗೋಪಿಯರ ಕಣ್ಮಣಿ ಎನಿಪ ವಸು
ದೇವಸುತನೆಂಬ ಮದ ಸೊಕ್ಕಿದಾನೆ ||4||
ಗರುಡವಾಹನವೇರಿ ಧಿಮಕೆಂದು ಬರುತಾನೆ
ಸರುವ ಲೋಕರಕ್ಷಕನೆಂಬ ಮದ್ದಾನೆ
ಉರೆ ಪೂತನಿಯ ಹೀರಿ ಮಾವ ಕಂಸನ ಕೊಂದ
ಸಿರಿಯಾದಿಕೇಶವನೆಂಬ ಮದ ಸೊಕ್ಕಿದಾನೆ ||5||