ಆನೆಯ ನೋಡಿರಯ್ಯ ನೀವೆಲ್ಲರು
Category: ಶ್ರೀಕೃಷ್ಣ
Author: ಕನಕದಾಸ
ಆನೆಯ ನೋಡಿರಯ್ಯ ನೀವೆಲ್ಲರು
ಆನಂದ ಪಡೆಯಿರಯ್ಯ ||ಪ||
ತಾನು ತನ್ನವರೆಂಬ ಮಾನವರ ಸಲಹಿದ ||ಅ||
ಪಾಂಡು ಚಕ್ರೇಶನ ಸುತರಿಗೊಲಿದಾನೆ
ಗಂಡುಗಲಿ ಮಾಗಧನ ಒರಸಿದಾನೆ
ಹಿಂಡು ಗೋವಳರೊಳಗೆ ಹಿರಿಯನ ಕಳೆಯದಾನೆ
ಲಂಡರಿಗೆ ಎದೆಗೊಡುವ ಪುಂಡಾನೆ ||1||
ಬಾಲಕನ ನುಡಿಗೇಳಿ ಖಳನ ಸೀಳಿದಾನೆ
ಪಾಲುಂಡು ವಿದುರನ ಸಲಹಿದಾನೆ
ಲೋಲಾಕ್ಷಿ ಮಾನಭಂಗಕ್ಕಕೊದಗಿದಾನೆ
ಖೂಳ ಶಿಶುಪಾಲನನು ಸೀಳಿದಾನೆ ||2||
ಅಜಮಿಳನಿಗೆ ನಿಜಪದವಿಯ ಕೊಟ್ಟಾನೆ
ಕುಜನರೆಲ್ಲರನು ಒರಗಿಸಿದಾನೆ
ಅಜಪಿತ ಕಾಗಿನೆಲೆಯಾದಿಕೇಶವಾನೆ
ತ್ರಿಜಗವಲ್ಲಭ ತಾನು ಭಜಕರ ವಶವಾನೆ ||3||