ಆರಿಗಾರಿಲ್ಲ ಆಪತ್ಕಾಲದೊಳಗೆ
Category: ಶ್ರೀಕೃಷ್ಣ
Author: ಕನಕದಾಸ
ಆರಿಗಾರಿಲ್ಲ ಆಪತ್ಕಾಲದೊಳಗೆ
ವಾರಿಜಾಕ್ಷನ ನಾಮ ನೆನೆ ಕಂಡ್ಯ ಮನವೆ
ಹಸಿದು ಬಳಲುವಾಗ ಹಗೆ ಕೈಗೆ ಸಿಲುಕಿದಾಗ
ದೆಸೆಗೆಟ್ಟು ಅಧಿಕ ವ್ಯಾಧಿಯಲಿ ಇರುವಾಗ
ಅಸಮಾನನಾದಾಗ ಅತಿ ಭೀತಿಗೊಂಡಾಗ
ಬಿಸಜನಾಭನ ನಾಮ ನೆನೆಕಂಡ್ಯ ಮನವೆ ||1||
ಸಾಲದವರೆಳೆವಾಗ ಚಾಡಿ ಮಾತಿಗೆ ಭೂಪ
ಘಳುಘುಳಿಸುತ ಕೋಪವನು ತೋರಿದಾಗ
ಮೇಲು ತಾನರಿಯದಯೆ ನಿಂದೆ ಹೊಂದಿರುವಾಗ
ನೀಲಮೇಘಶ್ಯಾಮನ ನೆನೆಕಂಡ್ಯ ಮನವೆ || 2||
ಪಂಥದಲಿರುವಾಗ ಪದವಿ ತಪ್ಪಿರುವಾಗ
ದಂತಿಮದವೇರಿ ಬೆನ್ನತ್ತಿದಾಗ
ಕಂತುಪಿತ ಕಾಗಿನೆಲೆಯಾದಿಕೇಶವನ ನಿ-
ಶ್ಚಿಂತೆಯಿಂದಲಿ ನೀನು ನೆನೆಕಂಡ್ಯ ಮನವೆ ||3||