ಆರು ಹಿತವರು ಎಂದು ನಂಬಬೇಡ 

Category: ಶ್ರೀಕೃಷ್ಣ

Author: ಕನಕದಾಸ

ಆರು ಹಿತವರು ಎಂದು ನಂಬಬೇಡ
ಆರಿಗಾರಿಲ್ಲ ಆಪತ್ತು ಬಂದೊದಗಿದಡೆ

ಜನಕ ಹಿತದವನೆಂದು ನಂಬಬಹುದೇ ಹಿಂದೆ
ತನಯ ಪ್ರಹ್ಲಾದನಿಗೆ ಪಿತ ಮುನಿದನು
ಜನನಿ ರಕ್ಷಿಪಳೆಂಬೆನೇ ತಿಳಿತಿಳಿದು ಕುಂತಿ
ತನಯ ರಾಧೇಯನಿಗೆ ಎರಡೆಣಿಸಿದ ಮೇಲೆ ||1||

ಮಗನು ತೆತ್ತಿಗನೆನಲೆ ಕಂಸ ತನ್ನಯ ಪಿತನ
ನಿಗಳ ಬಂಧನದಿಂದ ಬಂಧಿಸಿದನು
ಜಗವರಿಯೆ ಸೋದರನು ಮಮತೆಯುಳ್ಳವನೆನಲೆ
ಹಗೆವೆರಸಿ ವಾಲಿಯನು ಅನುಜ ಕೊಲಿಸಿದ ಮೇಲೆ ||2||

ತನಗೆ ದೇಹಾನುಬಂಧಿಗಳೆ ಬಂಧುಗಳೆಂದು
ಮನದಿ ನಿಚ್ಚಳವಾಗಿ ನಂಬಬೇಡ
ಘನ ಕೃಪಾನಿಧಿ ಕಾಗಿನೆಲೆಯಾದಿಕೇಶವನ
ಅನುದಿನದಿ ನಂಬಿದವಗಿಹಪರದಿ ಸುಖವು || 3||