ಆರೂ ಸಂಗಡ ಬಾಹೋರಿಲ್ಲ 

Category: ಶ್ರೀಕೃಷ್ಣ

Author: ಕನಕದಾಸ

ಆರೂ ಸಂಗಡ ಬಾಹೋರಿಲ್ಲ
ನಾರಾಯಣ ನಾಮ ನೆರೆ ಬಾಹೋದಲ್ಲದೆ

ಹೊತ್ತು ನವಮಾಸ ಪರಿಯಂತ ಗರ್ಭದಲಿ
ಹೆತ್ತು ಅತ್ಯಂತ ನೋವು ಬೇನೆಗಳಿಂದಲಿ
ತುತ್ತು ವಸ್ತ್ರವನಿಕ್ಕಿ ಸಲಹಿದಾ ತಾಯ್ತಂದೆ
ಹೊತ್ತುಗಳೆವರಲ್ಲದೆ ಬೆನ್ಹತ್ತಿ ಬಹರೆ ||1||

ಗುರು ಬಂಧು ಬುಧ ಜನರು ನಿಂತಗ್ನಿ ಸಾಕ್ಷ್ಯಾಗಿ
ಕರವಿಡಿದು ಧಾರೆಯನೆರೆಸಿಕೊಂಡ
ತರುಣಿ ಇನಿಯನ ಹರಣ ಹೋಗಲು ತಾ ಕಂಡು ಬರುವುದಕಂಜಿ ದಾರು ಗತಿಯೆಂದಳುವಳು ||2||

ಮನೆ ಮಕ್ಕಳು ತಮ್ಮ ಧನಕೆ ಬಡಿದಾಡುವರು
ಧನಕಾಗಿ ನಿನ್ನನೆ ನಂಬಿದವರು
ಅನುಮಾನವೇಕೆ ಜೀವನು ತೊಲಗಿದಾಕ್ಷಣದಿ
ಇನ್ನೊಂದು ಅರಗಳಿಗೆ ನಿಲ್ಲಗೊಡರು ||3||

ಸುತ್ತಲು ಕುಳ್ಳಿರ್ದ ಮಿತ್ರ ಬಾಂಧವರೆಲ್ಲ
ಹೊತ್ತು ಹೋದೀತು ಹೊರಗೆ ಹಾಕೆನುವರು
ಹಿತ್ತಲಾ ಕಸಕಿಂತ ಅತ್ತತ್ತ ಈ ದೇಹ
ಹೊತ್ತುಕೊಂಡೊಯ್ದು ಅಗ್ನಿಯಲಿ ಬಿಸುಡುವರು ||4||

ಹರಣ ಹಿಂಗದ ಮುನ್ನು ಹರಿಯ ಸೇವೆಯ ಮಾಡಿ
ಪರಗತಿಗೆ ಸಾಧನವ ಮಾಡಿಕೊಳ್ಳೊ
ಕರುಣನಿಧಿ ಕಾಗಿನೆಲೆಯಾದಿಕೇಶವರಾಯನ
ನಿರುತದಲಿ ನೆನೆನೆನೆದು ಸುಖಿಯಾಗೊ ಮನುಜ ||5||

(* ಈ ಕೀರ್ತನೆ ಪುರಂದರಾಸರ ಅಂಕಿತದಲ್ಲೂ ಇದೆ.)