ಆರೂ ಸಮಯಕ್ಕೊದಗಲಿಲ್ಲ

Category: ಶ್ರೀಕೃಷ್ಣ

Author: ಕನಕದಾಸ

ಆರು ಸಮಯಕ್ಕೊದಗಲಿಲ್ಲ
ಮೋರೆ ನೋಡುತ ಸುಮ್ಮನಿಹರೆಲ್ಲ ||ಪ||

ಮಗಳು ಮಹಲಕುಮಿ ಮೊಮ್ಮಗನು ಸರಸಿಜಭವನು
ಖಗರಾಜವಾಹನನು ತನ್ನಳಿಯನು
ಅಗಜನಂದು ತನ್ನೊಡಲೊಳಿಂಬಿಟ್ಟು ಮೂ
ರ್ಬೊಗಸೆ ಮಾಡಿದ ಮುನಿಯ ಬಿಡಿಸಲಿಲ್ಲ ||1||

ಶ್ರೀದೇವಿ ಭೂದೇವಿ ಮಾತೆಯರು ತಾವಿರಲು
ಯಾದವರಾಯ ಮೋಹದ ತಂದೆಯು
ವೇದಮುಖದಣ್ಣನಿರೆ ಉರಿ ನಯನದಿಂದ ಸ್ಮರ
ಬೂದಿಯಾಗುವಾಗ ಬಿಡಿಸಲಿಲ್ಲವೇಕೆ ||2||

ಪಿತನು ಸಾಗರನು ಹಿತದಾಕೆ ಶ್ರೀದೇವಿ
ಅತಿ ಬೀಗನಾದವ ನಾರಾಯಣ
ಜತೆ ಅಳಿಯರು ಬೊಮ್ಮ ಮನ್ಮಥರಿರಲಾಗಿ
ಕ್ಷಿತಿಯೊಳಗೆ ಶಶಿ ಕ್ಷೀಣವಾಗುವ ಸಮಯದಿ ||3||

ತೆತ್ತೀಸ ಕೋಟಿ ದೇವರ್ಕಳು ತಾವಿರಲು
ಒತ್ತಿನಲಿ ಇಂದ್ರ ಉಪೇಂದ್ರರಿರಲು
ಮತ್ತೆ ಪಾರ್ವತಿ ಪುತ್ರ ವೀರೇಶ ದಕ್ಷನ
ನೆತ್ತಿ ಹರಿಗಡಿವಾಗ ನೋಡುತಿಹರೆಲ್ಲ ||4||

ಇಂಥಿಂಥ ದೊಡ್ಡವರು ಈ ಪಾಡು ಪಡಲಾಗಿ
ಭ್ರಾಂತ ಮನುಜರಿಗೆ ಪೇಳಲಿನ್ನೆಷ್ಟು
ಕಂತುಪಿತ ಕಾಗಿನೆಲೆಯಾದಿಕೇಶವನ
ಸಂತೋಷದಿಂ ನೆನೆದು ಸುಖಿಯಾಗೊ ಮನುಜ ||5||