ಆವ ಕರ್ಮವೊ ಇದು ಆವ ಧರ್ಮವೊ

Category: ಇತರೆ

Author: ಕನಕದಾಸ

ಆವ ಕರ್ಮವೊ ಇದು ಆವ ಧರ್ಮವೊ
ಆವ ಕರ್ಮವೆಂದರಿಯೆ, ಹಾರುವರಿವರು ಬಲ್ಲರೆ ||ಪ||

ಸತ್ತವನು ಎತ್ತ ಪೋದ
ಸತ್ತು ತನ್ನ ಜನ್ಮಕೆ ಪೋದ
ಸತ್ತವನು ಉಣ್ಣುವನೆಂದು
ನಿತ್ಯ ಪಿಂಡವಿಕ್ಕುತೀರಿ ||1||

ಎಳ್ಳು ದರ್ಭೆ ಕೈಲಿ ಪಿಡಿದು
ಪಿತರ ತೃಪ್ತಿ ಪಡಿಸುತೀರಿ
ಎಳ್ಳು ಮೀನು ನುಂಗಿ ಹೋಯಿತು
ದರ್ಭೆ ನೀರೊಳು ಹರಿದು ಹೋಯಿತು ||2||

ಎಡಕೆ ಒಂದು ಬಲಕೆ ಒಂದು
ಎಡಕೆ ತೋರಿಸಿ ಬಲಕೆ ತೋರಿಸಿ
ಕಡು ಧಾವಂತ ಪಡಿಸಿ
ಕಟಿಯ ಹಸ್ತದೊಳಗೆ ಪಿಡಿಸುತೀರಿ ||3||

ಮಂತ್ರಾಕ್ಷತೆಯ ಕೈಗೆ ಕೊಟ್ಟು
ಮೋಕ್ಷವನ್ನು ಹಾರೈಸುವಿರಿ
ಮಂತ್ರವೆಲ್ಲೊ ಅಕ್ಷತೆಯೆಲ್ಲೊ
ಮೋಕ್ಷವೆಲ್ಲೊ ಮರ್ತ್ಯವೆಲ್ಲೊ ||4||

ಹೇಳುವವನು ಅವಿವೇಕಿ
ಕೇಳುವವನು ಅಜ್ಞಾನಿ
ಹೇಳುವ ಕೇಳುವ ಇಬ್ಬರ ಸೊಲ್ಲ
ಆದಿಕೇಶವಮೂರ್ತಿ ಬಲ್ಲ ||5||