ಆವ ಪರಿಯಲಿ ನಿಮ್ಮನೊಲಿಸಿ ಮೆಚ್ಚಿಪ
Category: ಶ್ರೀಕೃಷ್ಣ
Author: ಕನಕದಾಸ
ಆವ ಪರಿಯಲಿ ನಿಮ್ಮನೊಲಿಸಿ ಮೆಚ್ಚಿಪ ವಿಧವು
ರವೆಯಷ್ಟು ತೋರದಲ್ಲ ||ಪ||
ದೇವ ದೇವೇಶ ನೀನೆಂದು ನಂಬಿರಲು ಕೃ
ಪಾವಲೋಕನದಿ ಸಲಹೊ ದೇವ ||ಅ||
ಫಣಿರಾಜನಾಸನದಿ ಕುಳಿತಿಹಗೆ ಅರಿವೆಯಾ
ಸನವ ನಾನೆಂತ್ಹಾಸಲಿ
ಘನವಾದ ಗಂಗೆಯನು ಪಡೆದವಗೆ ಕಲಶ ನೀ
ರನದೆಂತು ಮೈಗೆರೆಯಲಿ
ತನುವಿನ ಪರಿಮಳವು ಘಮಘಮಿಪನಿಗೆ ಸುಚಂ
ದನವದೆಂತು ನಾ ಪೂಸಲಿ
ಅನವರತ ನಾಭಿಯೊಳು ಶತಪತ್ರವಿಹಗೆ ಮಿ
ಕ್ಕಿನ ಪೂವ ಮುಡಿಸಲೆಂತೈ ದೇವ ||1||
ಸುರುಚಿರೋಜ್ವಲ ಪೀತವಾಸನಿಗೆ ಉಡುಗೊರೆಯ
ಅರಿವೆಯೇನನು ಪೊದಿಸಲಿ
ವರ ಕೌಸ್ತುಭವು ಕೊರಳೊಳಗೆ ಇಪ್ಪವಗೆ ಆ
ಭರಣವಾವುದ ತೊಡಿಸಲಿ
ತರಣಿ ಶತಕೋಟಿತೇಜನ ಮುಂದೆ ಹ್ಯಾಗೆ ನಾ
ಪೆರತೊಂದು ದೀಪವಿಡಲಿ
ನೆರಹಿದ ಫಣಿಪತಿಯ ಸ್ತೋತ್ರದೂರನ ನಾನು
ಸ್ಮರಿಪೆನೆಂತಯ್ಯ ದೇವ ದೇವ ||2||
ವನಜಜಾಂಡ ಕೋಟಿಯುದರಂಗೆ ಆವುದನು
ಉಣಿಸಿ ತೃಪ್ತಿಯ ಮಾಡಲಿ
ಅನಿಮಿಷರಿಗಮೃತವನ್ನೆರೆದವನ ತೃಷೆಯ ನೀ
ರಿನೊಳೆಂತು ಸಂತವಿಡಲಿ
ವಿನತೆಯಾತ್ಮಜ ಪಕ್ಷದನಿಲನಿರೆ ಬೇರೆ ಬೀ
ಸಣಿಗೆಯನ್ನೇಂ ಬೀಸಲಿ
ಅಣುರೇಣು ಪರಿಪೂರ್ಣ ಮೂರುತಿಗೆ ನಾ ಪ್ರದ
ಕ್ಷಿಣೆಯೆಂತು ಸುತ್ತಿಬರಲಿ ದೇವ ||3||
ಮಿಗೆ ಫಣಿಯ ಫಣದಾತಪತ್ರವಿರುವಂಗೆ ನೆರ
ಳಿಗೆ ಕೊಡೆಯನೇಂ ಪಿಡಿಯಲಿ
ಪಗಲಿರುಳು ಸಾಮಗಾನ ಪ್ರಿಯನ ಮುಂದೆ ಗೀ
ತಗಳ ನಾನೇಂ ಪಾಡಲಿ
ಜಗವರಿಯೆ ಲಕ್ಷ್ಮೀದೇವಿಪತಿಗೆ ಎಷ್ಟು ಹೊ
ನ್ನುಗಳ ದಕ್ಷಿಣೆಯ ಕೊಡಲಿ
ನಿಗಮತತಿ ಕಾಣದಿಹ ಮಹಿಮನಿಗೆ ನಮಿಸುವ
ಬಗೆಯ ನಾನರಿವೆನೆಂತೈ ದೇವ ||4||
ಒಲಿಸುವುದನರಿಯೆ ಮೆಚ್ಚಿಸುವ ಬಗೆಯರಿಯೆ ಹೊ
ಗಳುವ ಹೊಲಬ ನಾನರಿಯೆನು
ತಿಳಿದುದಿಲ್ಲವು ಷೋಡಶೋಪಚಾರದ ಪೂಜೆ
ಗಳಲೊಂದು ಪರಿಯಾದರೂ
ನೆಲೆಯ ಕಾಣೆನು ನಿಗಮಶಾಸ್ತ್ರ ನವವಿಧ ಭಕ್ತಿ
ಯೊಳಗೊಂದು ಬಗೆಯಾದರೂ
ಅಳಿಲಸೇವೆಯನೊಪ್ಪಿಸಿಕೊಂಡು ಶರಣನ ಸಲಹೊ
ನೆಲೆಯಾದಿ ಕೇಶವನೆ ಸ್ವಾಮಿ-ಪ್ರೇಮಿ ||5||