ಆವ ಬಲವಿದ್ದರೇನು ವಾಸುದೇವನಾ

Category: ಶ್ರೀಕೃಷ್ಣ

Author: ಕನಕದಾಸ

ಆವ ಬಲವಿದ್ದರೇನು- ವಾಸು
ದೇವನಾ ಬಲವು ನಿಜವಾಗಿ ಇರದನಕ ||ಪ||

ನೊಸಲಗಣ್ಣಿನ ಬಲ ನಾಲ್ಕು ತೆರದ ಬಲ
ತ್ರಿಶೂಲ ಡಮರು ಅಗ್ನಿ ಫಣಿಯ ಬಲವು
ಪಶುಪತಿಯ ರೂಪಿನ ಬಲದ ಶಿಶುಪಾಲನ
ಅಸುರಮರ್ದನ ಕೃಷ್ಣ ಶಿರವ ಛೇದಿಸುವಾಗ ||1||

ಹರನ ಕರುಣದ ಬಲವು ಸುರರ ಗೆಲಿದಾ ಬಲವು
ಪರಮಶಕ್ತಿಯು ತನ್ನ ಭುಜದ ಬಲವು
ಧರೆಯನೆತ್ತಿದ ಬಲವುಳ್ಳ ಹಿರಣ್ಯಾಕ್ಷನ
ಶಿರವ ಹರಿ ವರಾಹನಾಗಿ ತರಿವಾಗ ||2||

ಮುನ್ನ ಗೆಲಿದ ಬಲ ಮುಕ್ಕಣ್ಣ ಹರನ ಬಲ
ಘನ್ನ ಲಂಕಿಣಿಯ ಕಾವಲಿನ ಬಲವು
ತನ್ನ ವಂಶದ ಬಲವುಳ್ಳ ರಾವಣನ ಶಿರವ
ಸನ್ನುತ ರಾಘವ ಪಟ್ಟನೆ ಪಾರಿಸುವಾಗ ||3||

ಲಿಂಗಪೂಜೆಯ ಬಲ ನಿಶ್ಚಿಂತನಾಗಿಹ ಬಲ
ಹಿಂಗದೆ ಹರನು ಬಾಗಿಲ ಕಾಯ್ದ ಬಲವು
ಮುಂಗೈಯ ಶಕ್ತಿ ಸಾವಿರತೋಳ ಬಾಣನ
ತುಂಗ ವಿಕ್ರಮ ಕೃಷ್ಣ ತೋಳ ಖಂಡಿಸುವಾಗ ||4||

ಈಸುದೇವರ ಬಲಗಳಿದ್ದರೆ ಫಲವೇನು
ವಾಸುದೇವನ ಬಲವಿಲ್ಲದವಗೆ
ದೇಶಕಧಿಕ ಕಾಗಿನೆಲೆಯಾದಿಕೇಶವನ
ಲೇಸಾದಿ ಚರಣಕಮಲದ ಬಲವಿರದನಕ ||5||