ಇಂದು ನೀ ಕರೆದು ತಾರೆ

Category: ಶ್ರೀಕೃಷ್ಣ

Author: ಕನಕದಾಸ

ಇಂದು ನೀ ಕರೆದು ತಾರೆ- ಬಾರದೆ ಶ್ರೀಗೋ
ವಿಂದ ತಾ ಮುನಿದಿಹರೆ- ವಿರಹ ಬೇಗೆಯಲಿ
ಬೆಂದು ಸೈರಿಸಲಾರೆ- ಸಖಿ, ನೀನು ತಂದು ತೋರೆ ||ಪ||

ನೊಂದರೂ ಮನದಾನಂದದಿಂದ
ನಂದನಂದನನೆಂದು ಸೈರಿಸಿ
ಎಂದಿಗೂ ಅಗಲಿರಲಾರೆ ಕರೆತಂದು
ಹೊಂದುಗೂಡಿಸೆ ಮಂದಗಮನೆ ||ಅ||

ಕಾಲಿಲ್ಲದಲೆ ಆಡಿದ- ವೇದ ತಂದಿತ್ತ
ಕಾಲಿಲ್ಲದವನ ಪೊತ್ತ- ಅಮೃತ ತಂದಿತ್ತ
ಕಾಲ ತೂಗಿ ನೋಡುತ್ತ- ಗಜ ಉನ್ಮತ್ತ
ಕಾಲಿನಿಂದಲಿ ಕೊಲುವ ರೂಪದಿ
ಕಾಲಿನಲಿ ರಿಪುವನು ಸೀಳಿದ
ಕಾಲಿನಲಿ ತಾನಳೆದ ಮೇದಿನಿ
ಕಾಲಿನಲಿ ನಡೆದ ಭಾರ್ಗವ
ಕಾಲಿನಲಿ ವನವಾಸ ಪೋದನ
ಕಾಲಿನಲಿ ಕಾಳಿಯನ ಮರ್ದಿಸಿದನ
ಕಾಲಿನಲಿ ತ್ರಿಪುರರ ಗೆಲಿದನ
ಕಾಲಿಗೆರಗುವೆ ತೇಜಿರೂಢನ ||1||

ಎವೆಯಿಕ್ಕದೆ ನೋಡಿದ- ತಲೆಯ ತಗ್ಗಿಸಿ
ಕವಲು ಕೋರೆದಾಡೆಯೊಳಾಡಿದ- ಕಂಬದಿ ಮೂಡಿದ
ತವಕದಿಂದಲಿ ಬೇಡಿದ- ಭೂಭುಜರ ಕಡಿದ
ಪೌರಾಣಿಕ ವಾವೆ ವರಸೆಯ ಮುಂಡಿಗೆಗಳು
ಶಿವನ ಬಿಲ್ಲನು ಮುರಿದ- ದೇವಕಿ
ಕುವರ ನಗ್ನ ಹಯವನೇರಿದ
ವಿವಿಧಾಬ್ಧಿಯೊಳಾಡಿ ಗಿರಿಧರ
ಸವಿದು ಬೇರನು ಬಾಲಗೊಲಿದನ
ಅವನಿ ಬೇಡಿ ಕೊಡಲಿ ಪಿಡಿದನ
ಸವರಿ ದಶಶಿರ ಬೆಣ್ಣೆ ಕದ್ದನ
ಯುವತಿಯರ ವ್ರತಗೆಡಿಸಿ ಕುದುರೆಯ
ಹವಣುಗತಿಯಲಿ ಏರಿದಾತನ ||2||

ವರ ಮತ್ಸ್ಯ ನಗಧರನ- ಸೂಕರ ಸಿಂಹನ
ತಿರುಕ ತಾಯ್ತರಿದನ- ವರವಿತ್ತು ಶಬರಿಗೆ
ತುರುಗಾಯ್ದ ನಿರ್ವಾಣನ- ಅಶ್ವಾರೂಢನ
ಊರಿಲ್ಲದೆ ಹೊರೆ ಹೊತ್ತನ ಮುರುಢ ಕ್ರೂರನ
ಉರವ ಸೀಳಿದ ವಿಪ್ರ ನೃಪರರಿ
ಧರಣಿಜೆಯವರ ಕೃಷ್ಣ ಗಗನದಿ
ಪುರವ ದಹಿಸಿದ ತೇಜಿರೂಢನ
ಮೆರೆವ ಜಲಜ ಕೂರ್ಮ ವರಹ
ನರಹರಿ ದ್ವಿಜ ಕೊರಳಕೊಯ್ದವನ ನೆಲಮಗಳ ವರ
ಶೌರಿ ಬುದ್ಧನ ತುರಗವೇರಿದ ಆದಿಕೇಶವನ ||3||