ಇರಬಂದುದಿಲ್ಲ ಸಂಸಾರ

Category: ಶ್ರೀಕೃಷ್ಣ

Author: ಕನಕದಾಸ

ಇರಬಂದುದಿಲ್ಲ ಸಂಸಾರ- ಇದನರಿತು
ಸಿರಿಹರಿಯ ಭಜಿಸುವುದು ಸಾರ ||ಪ||

ಧರೆಯನಾಳಿದ ತ್ರಿಶಂಕು ದೊರೆಯು ತಾನೆಲ್ಲಿ
ಹರಿಶ್ಚಂದ್ರ ಮೊದಲಾದ ಚಕ್ರವರ್ತಿಗಳೆಲ್ಲಿ
ಶರಧಿ ಮಧ್ಯದೊಳಿದ್ದ ರಾವಣಾಸುರನೆಲ್ಲಿ
ಸಿರಿಯುಳ್ಳ ಕೌರವರು ಪಾಂಡವರು ತಾವೆಲ್ಲಿ
ಧರೆಗಿಳಿದು ಪೋದಾತ ವಾಲಿಯು ತಾನೆಲ್ಲಿ
ಸುರರೊಡನೆ ಹೋರಿದಾ ಬಲಿಯು ತಾನೆಲ್ಲಿ ||1||

ದಶರಥ ಮೊದಲು ಷೋಡಶ ರಾಯರುಗಳೆಲ್ಲಿ
ಅಸಹಾಯ ಶೂರ ವೀರ ವಿಕ್ರಮರೆಲ್ಲಿ
ಅಸಮಬಲ ವಸುಮತಿಯ ಹಿರಣ್ಯಾಕ್ಷನೆಲ್ಲಿ
ವಸುಧೆಯೊಳಗಿದ್ದ ಹದಿನಾರು ಸಾವಿರರೆಲ್ಲಿ
ಸುಶರೀರ ಎನಿಸಿದ ಅಭಿಮನ್ಯು ತಾನೆಲ್ಲಿ ||2||

ಈ ಪರಿಯೆ ಈ ಧರೆಯನಾಳಿ ಹೋದವರೆಷ್ಟು
ಈ ಪರಿಯೆ ಸ್ವರ್ಗಕ್ಕೆ ಇಂದ್ರಾದಿಗಳು ಎಷ್ಟು
ಈ ಪರಿಯೆ ಹರಬ್ರಹ್ಮರಾದವರು ತಾವೆಷ್ಟು
ಈ ಪರಿಯೆ ಯುಗಪ್ರಳಯವಾಗಿ ಹೋದವು ಎಷ್ಟು
ಈ ಪರಿಯೆ ಜಲ ಪ್ರಳಯವಾಗಿ ಹೋದವು ಎಷ್ಟು
ಶ್ರೀಪತಿ ಕೇಶವನಲಿಡು ಭಕುತಿ- ಕೊಡುವ ಮುಕುತಿ ||3||