ಇಷ್ಟು ದಿನ ಈ ವೈಕುಂಠ

Category: ಶ್ರೀಕೃಷ್ಣ

Author: ಕನಕದಾಸ

ಇಷ್ಟುದಿನ ಈ ವೈಕುಂಠ
ಎಷ್ಟು ದೂರವೊ ಎನ್ನುತಲಿದ್ದೆ
ದೃಷ್ಟಿಯಿಂದಲಿ ನಾನು ಕಂಡೆ
ಸೃಷ್ಟಿಗೀಶನೆ ಶ್ರೀರಂಗಶಾಯಿ ||ಪ||

ಎಂಟು ಏಳನು ಕಳೆದುದರಿಂದ
ತುಂಟರೈವರ ತುಳಿದುದರಿಂದ
ಕಂಟಕನೊಬ್ಬನು ಅಳಿದುದರಿಂದ
ಭಂಟನಾಗಿ ಬಂದೆ ಶ್ರೀರಂಗಶಾಯಿ ||1||

ವನ ಉಪವನಗಳಿಂದ
ಘನ ಸರೋವರಗಳಿಂದ
ಕನಕ ಗೋಪುರಗಳಿಂದ
ಘನಶೋಭಿತನೆ ಶ್ರೀರಂಗಶಾಯಿ ||2||

ವಜ್ರವೈಢೂರ್ಯ ತೊಲೆಗಳ ಕಂಡೆ
ಪ್ರಜ್ವಲಿಪ ಮಹಾದ್ವಾರವ ಕಂಡೆ
ನಿರ್ಜರಾದಿ ಮುನಿಗಳ ಕಂಡೆ
ದುರ್ಜನಾಂತಕ ಶ್ರೀರಂಗಶಾಯಿ ||3||

ರಂಭೆ ಊರ್ವಶಿ ಮೇಳವ ಕಂಡೆ
ತುಂಬುರು ನಾರದರ ಕಂಡೆ
ಅಂಬುಜೋದ್ಭವ ಪ್ರಮುಖರ ಕಂಡೆ
ಶಂಬರಾರಿ ಪಿತನೆ ಶ್ರೀರಂಗಶಾಯಿ ||4||

ನಾಗಶಯನನ ಮೂರುತಿ ಕಂಡೆ
ಭೋಗಿ ಭೂಷಣ ಶಿವನನು ಕಂಡೆ
ಭಾಗವತರ ಸಮ್ಮೇಲವ ಕಂಡೆ
ಕಾಗಿನೆಲೆಯಾದಿಕೇಶವ ಶ್ರೀರಂಗಶಾಯಿ ||5||