ಈತನೇನೆ ನಿನ್ನ ಮಗನು
Category: ಶ್ರೀಕೃಷ್ಣ
Author: ಕನಕದಾಸ
ಈತನೇನೆ ನಿನ್ನ ಮಗನು ||ಪ||
ಸೀತಾಪತಿ ರಘುನಾಥನೆಂಬವನು ||ಅ||
ವ್ಯಾಸನ ಜನನಿಯ ವಾಸನೆ ತಾಳ್ದನು
ದೇಶದೊಳಗೆ ಬಲು ಪೆಸರುಳ್ಳವನು
ನಾಸದೊಳೊರ್ವನ ಪೊತ್ತು ಮುರಿದು ಮು
ನೀಶರ ಶಾಪವ ಪಿಡಿದು ಕೊಂದಾತನು ||1||
ಆನೆವಾಹನ ಪಿತನ ತಾಯನಳೆದೋನು
ಭಾನುಸುತಗೆ ಶಾಪವಿತ್ತವನು
ಕಾನನ ಜನನಿಯ ಕೊಂದು ಪ್ರಿಯದಲಿ ನಿ
ಧಾನದಿ ಶರಧಿ ಶಯನ ಮಾಡಿದಾತನು ||2||
ಮೂಗ್ರಾಮ ಮುರಿದು ವಾಜಿಯನೇರಿದಾತನು
ಸಾಗ್ರದಿಂದಿಳೆಯ ಭಾಗ್ಯ ಹಿಂಗಿಸಿದ
ಯೊಗ್ಯದಿಂದ ಬಳಪತಿತನವನಿಗೆ
ಭಾಗ್ಯವಿತ್ತ ಕಾಗಿನೆಲೆಯಾದಿಕೇಶವ ||3||