ಈಶ ನಿನ್ನ ಚರಣ ಭಜನೆ ಆಶೆಯಿಂದ

Category: ಶ್ರೀಕೃಷ್ಣ

Author: ಕನಕದಾಸ

ಈಶ ನಿನ್ನ ಚರಣ ಭಜನೆ ಆಶೆಯಿಂದ ಮಾಡುವೆನು
ದೋಷ ರಾಶಿ ನಾಶ ಮಾಡು ಶ್ರೀಶ ಕೇಶವ

ಶರಣು ಹೊಕ್ಕೆನಯ್ಯ ಎನ್ನ ಮರಣ ಸಮಯದಲ್ಲಿ ನಿನ್ನ
ಚರಣ ಸ್ಮರಣೆ ಕರುಣಿಸಯ್ಯ ನಾರಾಯಣ ||1||

ಶೋಧಿಸೆನ್ನ ಭವದ ಕಲುಷ ಬೋಧಿಸಯ್ಯ ಜ್ಞಾನವೆನಗೆ
ಬಾಧಿಸುವಾ ಯಮನ ಬಾಧೆ ಬಿಡಿಸು ಮಾಧವ || 2||

ಹಿಂದನೇಕ ಯೋನಿಗಳಲಿ ಬಂದು ಬಂದು ನೊಂದೆ ನಾನು
ಇಂದು ಭವದ ಬಂಧ ಬಿಡಿಸು ತಂದೆ ಗೋವಿಂದನೆ ||3||

ಭ್ರಷ್ಟನೆನಿಸ ಬೇಡ ಕೃಷ್ಣ ಇಷ್ಟು ಮಾತ್ರ ಬೇಡಿಕೊಂಬೆ
ಶಿಷ್ಟರೊಳಗೆ ಇಟ್ಟು ಕಷ್ಟ ಬಿಡಿಸು ವಿಷ್ಣುವೆ ||4||

ಮೊದಲು ನಿನ್ನ ಪಾದ ಪೂಜೆ ಮುದದಿ ಗೈವೆನಯ್ಯ ನಾನು
ಹೃದಯದೊಳಗೆ ಒದಗಿಸಯ್ಯ ಮಧುಸೂದನ ||5||

ಕವಿದುಕೊಂಡು ಇರುವ ಪಾಪ ಸವೆದು ಹೋಗುವಂತೆ ಮಾಡಿ
ಜವನ ಬಾಧೆಯನ್ನು ಬಿಡಿಸೊ ಘನ ತ್ರಿವಿಕ್ರಮ ||6||

ಕಾಮಜನಕ ನಿನ್ನ ನಾಮ ಪ್ರೇಮದಿಂದ ಪಾಡುವಂಥ
ನೇಮವೆನಗೆ ಪಾಲಿಸಯ್ಯ ಸ್ವಾಮಿ ವಾಮನ ||7||

ಮದನನಯ್ಯ ನಿನ್ನ ಮಹಿಮೆ ವದನದಲ್ಲಿ ಇರುವ ಹಾಗೆ ಹೃದಯದಲ್ಲಿ ಸದನ ಮಾಡು ಮುದದಿ ಶ್ರೀಧರ ||8||

ಹುಸಿಯನಾಡಿ ಹೊಟ್ಟೆ ಹೊರೆವ ವಿಷಯದಲ್ಲಿ ರಸಿಕನೆಂದು
ಹುಸಿಗೆ ನನ್ನ ಹಾಕದಿರೋ ಹೃಷಿಕೇಶನೆ ||9||

ಅಬ್ಧಿಯೊಳಗೆ ಬಿದ್ದು ನಾನು ಒದ್ದುಕೊಂಬೆನಯ್ಯ ಭವದಿ
ಗೆದ್ದು ಪೋಪ ಬುದ್ಧಿ ತೋರೊ ಪದ್ಮನಾಭನೆ||10||

ಕಾಮಕ್ರೋಧ ಬಿಡಿಸಿ ನಿನ್ನ ನಾಮ ಜಿಹ್ವೆಯೊಳಗೆ ನುಡಿಸು ಶ್ರೀಮಹಾನುಭಾವನಾದ ದಾಮೋದರ ||11||

ಪಂಕಜಾಕ್ಷ ನೀನು ಎನ್ನ ಮಂಕುಬುದ್ಧಿ ಬಿಡಿಸಿ ನಿನ್ನ
ಕಿಂಕರನ್ನ ಮಾಡಿಕೊಳ್ಳೊ ಸಂಕರುಷಣ ||12||

ಏಸು ಜನ್ಮ ಬಂದರೇನು ದಾಸನಲ್ಲವೇನೊ ನಿನ್ನ
ಘಾಸಿ ಮಾಡದಿರೋ ಎನ್ನ ವಾಸುದೇವನೆ ||13||

ಬುದ್ಧಿ ಶೂನ್ಯನಾಗಿ ನಾನು ಕದ್ದ ಕಳ್ಳನಾದೆನಯ್ಯ
ತಿದ್ದಿ ಹೃದಯ ಶುದ್ಧಿ ಮಾಡೊ ಪ್ರದ್ಯುಮ್ನನೆ ||14||

ಜನನಿ ಜನಕ ನೀನೆ ಎಂದು ಎನುವೆನಯ್ಯ ದೀನಬಂಧು
ಎನಗೆ ಮುಕ್ತಿ ಪಾಲಿಸಿಂದು ಅನಿರುದ್ಧನೆ ||15||

ಹರುಷದಿಂದ ನಿನ್ನ ನಾಮ ಸ್ಮರಿಸುವಂತೆ ಮಾಡು ನೇಮ
ಇರಿಸು ಚರಣದಲ್ಲಿ ಕ್ಷೇಮ ಪುರುಷೋತ್ತಮ ||16||

ಸಾಧು ಸಂಗ ಕೊಟ್ಟು ನಿನ್ನ ಪಾದಭಜಕನೆನಿಸು ಎನ್ನ
ಭೇದ ಮಾಡಿ ನೋಡದಿರೋ ಅಧೋಕ್ಷಜ ||17||

ಚಾರುಚರಣ ತೋರಿ ಎನಗೆ ಪಾರುಗಾಣಿಸಯ್ಯ ಕೊನೆಗೆ
ಭಾರ ಹಾಕಿ ಇರುವೆ ನಿನಗೆ ನಾರಸಿಂಹನೆ ||18||

ಸಂಚಿತಾರ್ಥ ಪಾಪಗಳನು ಕಿಂಚಿತಾದರುಳಿಯದಂತೆ
ಮುಂಚಿತಾಗಿ ಕಳೆದು ಪೊರೆಯೊ ಸ್ವಾಮಿ ಅಚ್ಯುತ ||19||

ಜ್ಞಾನ ಭಕ್ತಿ ಕೊಟ್ಟು ನಿನ್ನ ಧ್ಯಾನದಲ್ಲಿ ಇಟ್ಟು ಎನ್ನ
ಹೀನ ಬುದ್ಧಿ ಬಿಡಿಸೊ ಮುನ್ನ ಜನಾರ್ದನ ||20||

ಜಪತಪಾನುಷ್ಠಾನ ನೀನು ಒಪ್ಪುವಂತೆ ಮಾಡಲಿಲ್ಲ
ತಪ್ಪ ಕೋಟಿ ಕ್ಷಮಿಸಬೇಕು ಉಪೇಂದ್ರನೆ ||21||

ಮೊರೆಯನಿಡುವೆನಯ್ಯ ನಿನಗೆ ಸೆರೆಯ ಬಿಡಿಸು ಭವದ ಎನಗೆ
ಇರಿಸು ಭಕ್ತರೊಳಗೆ ಪರಮಪುರುಷ ಶ್ರೀಹರೇ ||22||

ಪುಟ್ಟಿಸಲೇ ಬೇಡವಿನ್ನು ಪುಟ್ಟಿಸಿದಕೆ ಪಾಲಿಸಿನ್ನು
ಇಷ್ಟು ಬೇಡಿಕೊಂಬೆ ನಾನು ಶ್ರೀಕೃಷ್ಣನೆ ||23||

ಸತ್ಯವಾದ ನಾಮಗಳನು ನಿತ್ಯದಲ್ಲಿ ಪಠಿಸುವವರ
ಅರ್ತಿಯಿಂದ ಕಾಯದಿರನು ಕರ್ತೃ ಕೇಶವ ||24||

ಮರೆತು ಬಿಡದೆ ಹರಿಯ ನಾಮ ಬರೆದು ಓದಿ ಕೇಳುವರಿಗೆ
ಕರೆದು ಮುಕ್ತಿ ಕೊಡುವ ಬಾಡದಾದಿಕೇಶವ ||25||