ಊರಿಗೆ ಬಂದರೆ ದಾಸಯ್ಯ
Category: ಶ್ರೀಕೃಷ್ಣ
Author: ಕನಕದಾಸ
ಊರಿಗೆ ಬಂದರೆ ದಾಸಯ್ಯ- ನಮ್ಮ
ಕೇರಿಗೆ ಬಾ ಕಂಡ್ಯ ದಾಸಯ್ಯ ||ಪ||
ಕೈಲಿ ಕೋಲು ಕೊಳಲು ದಾಸಯ್ಯ
ಕಲ್ಲಿಗೆ ವರವಿತ್ತೆ ದಾಸಯ್ಯ
ಮಲ್ಲನ ಮರ್ದಿಸಿ ಮಾವನ ಮಡುಹಿದ
ನೀಲ ಮೇಘಶ್ಯಾಮ ದಾಸಯ್ಯ ||1||
ಕೊರಳೊಳು ವನಮಾಲೆ ದಾಸಯ್ಯ- ಬಲು
ಗಿರಿಯನು ನೆಗಹಿದೆ ದಾಸಯ್ಯ
ಇರುಳು ಹಗಲು ನಿನ್ನ ಕಾಣದೆ ಇರಲಾರೆ
ಮರುಳು ಮಾಡುವಂಥ ದಾಸಯ್ಯ||2||
ಆದಿನಾರಾಯಣ ದಾಸಯ್ಯ
ಮೋದದೊಂದು ಸಾಸಿರ ನಾಮದ ದಾಸಯ್ಯ
ಮೇದನಿಯೊಳು ಪುಟ್ಟಿ ಗೋವ್ಗಳ ಕಾಯ್ದ
ಆದಿಕೇಶವರಾಯ ದಾಸಯ್ಯ ||3||