ಎಂತಹುದೊ ನಿನ್ನಯ ಭಕುತಿ

Category: ವೈರಾಗ್ಯ

Author: ಕನಕದಾಸ

ಎಂತಹುದೊ ನಿನ್ನಯ ಭಕುತಿ ಎನಗೆ- ಶ್ರೀ
ಕಾಂತ ನಿನ್ನಯ ಒಲುಮೆಯಿಲ್ಲದ ಮೂಢಾತ್ಮನಿಗೆ ||ಪ||

ಹಿಂದೆ ಮಾಡಿದ ಸುಕೃತ ಫಲವು ಮೊದಲಿನಿತಿಲ್ಲ
ಇಂದು ಬಂದಡೆ ಒಳ್ಳೆ ಮತಿಯ ಕೊಡಲಿಲ್ಲ
ಸಂದ ವಯಸನು ತಿಳಿದು ಕುಂದುತಿದೆ ಎನ್ನ ಮನ
ದಂಧಕಾರವ ಬಿಡಿಸಿ ಹೊಂದಿಸು ಜ್ಞಾನವನು ||1||

ವೇದಶಾಸ್ತ್ರ ಶಬ್ದ ತರ್ಕ ಮೀಮಾಂಸೆಗಳ
ಓದಿದವನಲ್ಲ ನಿನ್ನಯ ಭಕುತಿಗಧಿಕ
ವಾದ ಇನ್ನೊಂದೇನನಸುರುವೆನು ನಾ ಮುನ್ನ ಸಂ
ಪಾದಿಸುವ ಭಕುತಿ ಇನ್ನೆಂತಿಹುದೊ ದೇವ ||2||

ಹುಟ್ಟಿದ ಮೊದಲುಗೊಂಡು ಇಂದು ಪರಿಯಂತರವು
ಭ್ರಷ್ಟನಾಗಿ ಪರರ ಸೇವೆಯಿಂದಿರುತಿಹೆನು
ಇಷ್ಟಲ್ಲದಿನ್ನೆನಗೆ ತೃಪ್ತಿ ಇನ್ನೆಂತಿಹುದೀ
ಕಷ್ಟ ಶರೀರದೊಳು ತೊಳಲಲಾರೆನು ಹರಿಯೆ ||3||

ನರಜನ್ಮವೆಂಬ ಪಾತಕದ ಪಂಜರದೊಳಗೆ
ಸ್ಥಿರವೆಂಬೊ ಅಹಂಕೃತಿ ಜೀವನವ ನಿರ್ಮಿಸಿ
ಎರವಿನ ಮಾತಾಪಿತರನುಜರೆಂಬ
ಉರಿಕಾವು ಕ್ಷಯವೆಂಬ ಸರಿಗಳನು ವಂದಿಸುವೆನು ||4||

ಇನಿತು ಪರಿಯಲಿ ನಾನು ಹಲುಬಿದೊಡೆ
ನೀನು ಸುಮ್ಮನಿದ್ದೊಡೆ ಬಹು ಅಪಕೀರ್ತಿಯು
ನಿನ್ನ ದಾಸಗೊಲಿದು ಸಲಿಸಯ್ಯ ಮನದಿಷ್ಟ
ಕನಕಾದ್ರಿಯೊಳು ನೆಲಸಿದಾದಿಕೇಶವರಾಯ ||5||