ಎಂದಿದ್ದರೀ ಕೊಂಪೆ ಎನಗೆ ನಂಬಿಕೆಯಿಲ್ಲ 

Category: ವೈರಾಗ್ಯ

Author: ಕನಕದಾಸ

ಎಂದಿದ್ದಿರೀ ಕೊಂಪೆ ಎನಗೆ ನಂಬಿಕೆಯಿಲ್ಲ ||ಪ||
ಮುಂದರಿತು ಶ್ರೀಹರಿಯ ಭಜಿಸುವುದು ಲೇಸು ||ಅ||

ಎಲುವುಗಳು ತೊಲೆಜಂತೆ ನರಗಳವು ಬಿಗಿದಂತೆ
ಬಲಿದ ಚರ್ಮವು ಮೇಲು ಹೊದಿಕೆಯಂತೆ
ಗಳಗಳನೆ ನುಡಿವ ನಾಲಗೆ ಗಂಟೆಯುಲಿಯಂತೆ
ಕೆಲಕಾಲಕೀ ಕೊಂಪೆ ಕಡೆಗಾಹುದಂತೆ ||1||

ಕಂಡಿಗಳು ಒಂಬತ್ತು ಕಳಬಂಟರೈವರು
ಅಂಡಲೆವುದೊತ್ತಿನಲಿ ಷಡುವರ್ಗವು
ಮಂಡಲಕೆ ಹೊಸಪರಿಯ ಮನ್ಮಥನ ಠಾಣ್ಯವಿದು
ಮಂಡೆ ಹೋಗುವುದನ್ನು ಅರಿಯದೀ ಕೊಂಪೆ ||2||

ಕೊಂಪೆಯಲಿ ಶೃಂಗಾರ ಕೊಂಡಾಡಲವಳಲ್ಲ
ಕೆಂಪು ಬಣ್ಣಗಳಿಂದ ಚೆನ್ನಾಯಿತು
ಇಂಪಿನಲಿ ಕಾಗಿನೆಲೆಯಾದಿಕೇಶವನನ್ನು
ಸೊಂಪಿನಲಿ ನೆನೆನೆನೆದು ಸುಖಿಯಾಗು ಮನುಜಾ ||3||