ಎನ್ನ ನುಡಿ ಪುಸಿಯಲ್ಲ ಈ ಜಗದೊಳು
Category: ಇತರೆ
Author: ಕನಕದಾಸ
ಎನ್ನ ನುಡಿ ಪುಸಿಯಲ್ಲ ಈ ಜಗದೊಳು ||ಪ||
ಅರವಿಂದವಿಲ್ಲದಿಹ ಕೊಳವು ತಾ ಕಂಗಳವು
ಹರಿಣಾಂಕನಿಲ್ಲದಿಹ ಇರುಳು ಮರುಳು
ಸ್ವರಭೇದವಿಲ್ಲದಿಹ ಸಂಗೀತವಿಂಗೀತ
ಸರಸವಿಲ್ಲದ ಸತಿಯ ಭೋಗ ತನುರೋಗ ||1||
ಪಂಥ ಪಾಡುಗಳನರಿಯದ ಬಂಟನವ ತುಂಟ
ಅಂತರವರಿಯದಾ ವೇಶಿ ಹೇಸಿ
ದಂತಿಯಿಲ್ಲದ ಅರಸು ಮುರಿದ ಕಾಲಿನ ಹೊರಸು
ಅಂತಸ್ಥವಿಲ್ಲದ ಪ್ರಧಾನಿ ಮದ್ಯಪಾನಿ ||2||
ಮಾಗಿಯಲಿ ಸತಿಯನಗಲಿದ ಕಾಂತನವ ಭ್ರಾಂತ
ಪೂಗಣೆಯ ಗೆಲಿಯದಿಹ ನರ ಗೋಖುರ
ಭೋಗಿಸದೆ ಇಹಪರಕೆ ಗಳಿಸಿದರ್ಥ ಅಪಾರ್ಥ
ಕಾಗಿನೆಲೆಯಾದಿಕೇಶವನ ಭಕ್ತ ಮುಕ್ತ ||3||