ಎಲ್ಲಿಂದ ಬಂದೆ ಮುಂದೆತ್ತ ಪಯಣ
Category: ವೈರಾಗ್ಯ
Author: ಕನಕದಾಸ
ಎಲ್ಲಿಂದ ಬಂದೆ ಮುಂದೆತ್ತ ಪಯಣ
ಇಲ್ಲಿ ನಿನಗೆಷ್ಟು ದಿನವಾಲಸ್ಯ ಮರುಳೆ ||ಪ||
ಮಾತೆಯುದರದೊಳು ನವಮಾಸ ಮಲ ಮೂತ್ರದೊಳು
ಯಾತನೆಯ ಯೋನಿ ಮುಖ ಮಾರ್ಗವಿಡಿದು
ಭೂತಳಕೆ ಬಂದ ಹದನೇನ ತೀರಿಸಿಕೊಂಡೆ
ಜಾತಿ ಯಾವುದು ನಿನ್ನ ಹೆಸರೇನು ಮರುಳೆ ||1||
ಮುಂದಾವ ಪಥವ ಸೇರುವೆ ಮರುಳೆ, ಸಾಕಿನ್ನು
ಹಿಂದೆ ನೆರವಾಗಿ ನಿಂತಾಪ್ತರುಂಟೆ
ಒಂದುಗೂಡಿದ ಪತ್ನಿ ಸುತರೆಲ್ಲ ವರ್ಜಿಪರು
ನಿಂದು ಮಾತಾಡು ಬರಿದೆ ಬಳಲಿದೆ ಮರುಳೆ ||2||
ಬರವಿದೇತಕೆ ನಿನ್ನ ಸ್ಥಳವೆಲ್ಲಿ ನೆಲೆಗೊಂಡು
ಇರುವ ಮಂದಿರವಾವುದದನೆನಗೆ ಪೇಳೊ
ಧರೆಯೊಳಗೆ ವರಕಾಗಿನೆಲೆಯಾದಿಕೇಶವನ
ಸಿರಿ ಚರಣಕಮಲವನು ನೆರೆನಂಬಿ ಸುಖಸೊ ||3||