ಎಲ್ಲಿರುವನೋ ರಂಗ ಎಂಬ ಸಂಶಯ ಬೇಡ

Category: ಶ್ರೀಕೃಷ್ಣ

Author: ಕನಕದಾಸ

ಎಲ್ಲಿರುವನೋ ರಂಗ ಎಂಬ ಸಂಶಯ ಬೇಡ ||ಪ||
ಎಲ್ಲಿ ಭಕ್ತರು ಕರೆಯೆ ಅಲ್ಲಿ ಬಂದೊದಗುವನು ||ಅ||

ತರಳ ಪ್ರಹ್ಲಾದ ಹರಿ ವಿಶ್ವಮಯನೆಂದು
ಬರೆದೋದಲವನ ಪಿತ ಕೋಪದಿಂದ
ಸ್ಥಿರವಾದಡೀ ಕಂಬದಲಿ ತೋರು ತೋರೆನಲು
ಭರದಿಂದ ಬರಲದಕೆ ವೈಕುಂಠ ನೆರೆಮನೆಯೆ ||1||

ಪಾಪ ಕರ್ಮವ ಮಾಡಿದಜಮಿಳನ ಯಮಭಟರು
ಕೋಪದಿಂದೆಳೆಯುತಿರೆ ಭೀತಿಯಿಂದ
ತಾ ಪುತ್ರನನು ಕರೆಯೆ ಕೇಳಿ ರಕ್ಷಿಸೆ ಶ್ವೇತ
ದ್ವೀಪವೀ ಧರೆಗೆ ಸನಿಹದಲ್ಲಿಹುದೆ ||2||

ಕರಿರಾಜನನು ನೆಗಳು ನುಂಗುತಿರೆ ಭಯದಿಂದ
ಮೊರೆಯಿಡಲು ಕೇಳಿ ತ್ವರಿತದಲಿ ಬಂದು
ಕರುಣದಲಿ ಬಂಧನವ ಪರಿಹರಿಸೆ ಗಜರಾಜ
ನಿರುವ ಸರಸಿಯು ಅನಂತಾಸನಕೆ ಮುಮ್ಮನೆಯೆ ||3||

ಕುರುಪತಿಯು ದ್ರೌಪದಿಯ ಸೀರೆಯನು ಸೆಳೆಯುತಿರೆ
ತರುಣಿ ಹಾ ಕೃಷ್ಣ ಎಂದೊದರೆ ಕೇಳ್ದು
ಭರದಿಂದ ಅಕ್ಷಯಾಂಬರವೀಯೆ ಹಸ್ತಿನಾ
ಪುರಿಗೆ ದ್ವಾರಾವತಿಯು ಕೂಗಳತೆಯೆ ||4||

ಅಣು ಮಹತ್ತಿನೊಳೆಲ್ಲ ಪರಿಪೂರ್ಣ ವಿಶ್ವಮಯ
ಗಣನೆಯಿಲ್ಲದ ಮಹಾಮಹಿಮನೆನಿಪ
ಘನ ಕೃಪಾನಿಧಿ ಕಾಗಿನೆಲೆಯಾದಿಕೇಶವನು
ನೆನೆದವರ ಮನದೊಳಿಹನೆಂಬ ಬಿರುದುಂಟಾಗಿ ||5||