ಎಷ್ಟು ಪ್ರೀತಿಯೊ ಮನಕೆ
Category: ಶ್ರೀಕೃಷ್ಣ
Author: ಕನಕದಾಸ
ಎಷ್ಟು ಪ್ರೀತಿಯೊ ಮನಕೆ ಎಷ್ಟು ಪ್ರೀತಿಯೊ ||ಪ||
ಇಷ್ಟವೆಂದು ತಿಳಿದು ಈ ಕಷ್ಟ ಸಂಸಾರ ಹೊರುವುದು ||ಅ||
ಹಸಿವು ತೃಷೆಯು ಶೋಕ ಮೋಹ ಅಸುವಗೊಂಬ ಜನನ ಮರಣ
ವಿಷ ಸಮಾನವಾದ ಬಹಳ ವ್ಯಸನ ಮೆರವಣಿ
ಮುಸುಕಿ ಕವಿವ ವ್ಯಾಘ್ರದಂತೆ ಅಡಗಿ ಮುಪ್ಪುಗೊಂಬ ರೋಗ
ವಿಷಯದೊಳಗೆ ಕ್ಲೇಶಬಟ್ಟು ವಿಷಯದಿಚ್ಛೆ ಬಿಡದ ಮನಕೆ ||1||
ನೀರಗುಳ್ಳೆ ಎನಿಪ ಕಣ್ಣ ನೀರಜಾಕ್ಷಿ ಎಂದು ಮತ್ತೆ
ಸೋರುವ ಜಘನ ಕರಿಯ ಕುಂಭ, ಸುರಿವ ಶ್ಲೇಷ್ಮದ
ಮೋರೆ ಚಂದ್ರಬಿಂಬ, ಮಾಂಸವಿಕಾರವಾದ ಕುಚವ ಕನಕಕಲಶ
ಸಾರವೆಂದು ನರಕರೂಪಿನ ನಾರಿಯರಿಗೆ ಭ್ರಮಿಸಿ ಬಾಳ್ವುದು ||2||
ಅಸ್ತಿ ಚರ್ಮ ರಕ್ತ ಮಾಂಸ ವಿಸ್ತರವಾದ ಹೇಯ ಮಧ್ಯಮೆ
ವಸ್ತು ಏರುತಿಳಿಯುತುದಯ ಅಸ್ತಮಾನದಿ
ರಕ್ತಕುಸುಮಗಂಧಮಾಲೆ ಕಸ್ತೂರಿಯನು ಪೂಸಿಕೊಂಡು
ವಸ್ತ್ರ ಒಡೆವ ಇಟ್ಟು ಬಹಳ ಶಿಸ್ತು ನರಕಿಯೆನಿಸಿ ಮೆರೆವುದು ||3||
ಬೇಯದಿರುವ ಹಸಿಯ ಬಿಂದಿಗೆ ತೋಯ ಹಿಂಗುವಂತೆ ಸಾಕ್ಷಿ
ಆಯುಷ್ಯವನರಿಯದಿರುವ ಕಾಯ ಸೌಖ್ಯದಿ
ಆಯಾಸಪಟ್ಟು ಗಳಿಸಿದರ್ಥ ಹೇಯವೆನದೆ ಭೋಗಿಸುತ್ತ
ಬಾಯ ಸವಿಯನುಂಡು ಕಡೆಗೆ ನಾಯ ಸಾವು ಸಾಯೊ ಬಾಳಿಗೆ ||4||
ಮನ್ನಿಸಿ ಗುರುಹಿರಿಯರುಕ್ತಿಯನ್ನು ಕೇಳದೆ ಕಿವುಡುಗೆಟ್ಟು
ಜೊನ್ನೆಯ ತುಪ್ಪ ಅನ್ನ ಒಲ್ಲದೆ ಎಲುವು ಮಾಂಸವನ್ನು ತಿಂಬ
ಕುನ್ನಿಯಾದೆನಯ್ಯ ಕೃಷ್ಣ ನಿನ್ನ ಮಾಯದೊಳು ಸಿಲ್ಕಿದ
ಎನ್ನನುದ್ಧರಿಸೊ ಸುಪ್ರಸನ್ನ ಆದಿಕೇಶವ ||5||