ಏಕೆ ನಡುಗಿದೆ ತಾಯೆ ಭೂಮಿ ನಡುರಾತ್ರಿಯೊಳು
Category: ಇತರೆ
Author: ಕನಕದಾಸ
ಏಕೆ ನಡುಗಿದೆ ತಾಯೆ ಭೂಮಿ ನಡುರಾತ್ರಿಯೊಳು- ಜಗ ||ಪ||
ದೇಕ ಪೊಡವಿಗೊಡೆಯನ ರಾಣಿ ಪರಮ ಕಲ್ಯಾಣಿ ||ಅ||
ಗುರು ಹಿರಿಯರನು ಕಂಡು ಮುರುಕಿಸುವ ಮೋರೆಯಲಿ
ಅರೆಮತಿಯ ಕೊಂಕು ಮಾತುಗಳನಾಡಿ
ಚರಣಕೆರಗದ ಮನುಜರಿರಬಾರದೆಂದೆನುತ
ಮರ ಮುರಿದು ಒರಗಿ ಸಾಯಲಿ ಎಂದು ನಡುಗಿದೆಯ ||1||
ಉತ್ತಮರ ಹೊಟ್ಟೆಯಲಿ ಬಗಳೊ ಶ್ವಾನವು ಹುಟ್ಟಿ
ಹೆತ್ತವರ ನಿರ್ಬಂಧಕೊಳಗು ಮಾಡಿ
ಅತ್ತೆ ಮಾವರ ಕೀರ್ತಿಯ ಕೊಂಡಾಡುವಧಮರ
ಹೊತ್ತು ಇರಲಾರೆನೆನುತ ಮತ್ತೆ ನಡುಗಿದೆಯ ||2||
ಕಳ್ಳತನವನು ಕಲಿತು ಕಾಲೋಚಿತವ ಕೇಳ್ದು
ಸುಳ್ಳು ಮಾತುಗಳಾಡಿ ಒಡಲ ಪೊರೆದು
ಕೊಳ್ಳಿ ದೆವ್ವಗಳಂತೆ ಅಲೆದಾಡುತಿರುವಂಥ
ಸುಳ್ಳು ಮನುಜರ ಹೊರಲಾರೆನೆಂದು ನಡುಗಿದೆಯೆ ||3||
ಕಲಿಯುಗದಿ ಮುರಹರನ ಸ್ಮರಣೆಯನು ಮಾಡದೆಯೆ
ಸಲೆ ಭಕ್ತಿಯಿಂ ವೇದ ಶಾಸ್ತ್ರವನೋದದೆ
ಲಲನೆಯರ ಮೇಲೆ ಕಣ್ಣಿಡುವ ಹೊಲೆಯರನು ನಾ
ನೊಲಿದು ಹೊರಲಾರೆನೆಂದು ನಡುಗಿದೆಯ ||4||
ಧರೆಯೊಳಗೆ ಕರ್ಮಿಗಳು ಹೆಚ್ಚಿ ಕವಿತ್ವವ ಕಲಿತು
ನರಕುರಿಗಳೆಲ್ಲರು ನಡೆಗೆಟ್ಟರೆಂದು
ಗುರುವೆ ಕೇಳಯ್ಯ ಕನಕಪ್ರಿಯ ತಿರುಪತಿಯ
ಗಿರಿಯಾದಿಕೇಶವನೆ ಒಲಿದು ನಿಲ್ಲಿಸಿದ ||5||