ಏಣನಯನೆ ಏಣಭೋಜ ಮಧ್ಯಳೆ ತೋರೆ

Category: ಶ್ರೀಕೃಷ್ಣ

Author: ಕನಕದಾಸ

ಏಣನಯನೆ ಏಣಭೋಜ ಮಧ್ಯಳೆ ತೋರೆ
ಏಣಾಂಕ ಬಿಂಬ ಮುಖಿ
ಏಣವೈರಿಯ ವೈರಿಯ ಶಿರಕುಚಯುಗೆ ಕರೆತಾರೆ
ಏಣಾಂಕಧರ ಸಖನ ||ಪ||

ಚಳಿಯ ಮಗಳ ತಾಯಳಿಯನ ತನಯನ
ಇಳುಹದೆ ಪೊತ್ತಿಹನ
ಬಳಿದುಣ್ಣಲೀಸದೆ ಸೆಳೆದುಂಡನಣ್ಣನ
ಸಲಹಿದಾತನ ಸುತನ
ಕಳದೊಳು ತಲೆ ಚೆಂಡಾಡಿದ ಧೀರನ
ಬಳಿ ವಾಘೆಯನು ಪಿಡಿದನ
ಇಳೆಯ ಮೊರೆಯನು ಕೇಳಿ ಖಳರುತ್ತಮಾಂಗವ
ನಿಳುಹಿದಾತನ ತೋರೆಲೆ ||1||

ಇಪ್ಪತ್ತನಾಲ್ಕು ನಾಮಗಳೊಳಗೇಳನು
ತಪ್ಪದೆಣಿಸಿ ಕಳೆದು
ಬಪ್ಪ ಎಂಟನೆಯ ನಾಮದ ಪೆಸರಿನೊಳ್
ಇಪ್ಪ ಕಡೆಯ ಬೀಡಲಿ
ಅಪ್ಪ ಜಯದರಸನ ಕೂಡೆ ಜನಿಸಿದ
ಕಪ್ಪು ವರ್ಣದ ಮೈಯಳ
ಅಪ್ಪನ ಮಿತ್ರನ ಮಗನೆಂಬ ಬೊಮ್ಮನ
ಬೊಪ್ಪನ ತೋರೆನಗೆ ||2||

ಪೌರಾಣಿಕ ವಾವೆ ವರಸೆಯ ಮುಂಡಿಗೆಗಳು
ಬಿಡುಗಣ್ಣ ಬಾಲೆ ತನ್ನೊಡೆಯನ ನುಡಿಗೇಳಿ
ದೃಢದಿಂದ ನಡೆದು ಬಂದು
ಜಡಿವ ಕೋಪಕೆ ಶಾಪ ಪಡೆದುಕೊಂಡಾಕ್ಷಣ
ನುಡಿದ ದಿನವು ದಾಟಲು
ಪಡೆಯನೆಲ್ಲವ ನಡು ರಣದಲಿ ಸೋಲಿಸಿ
ಜಡಿದು ಗೋವುಗಳನೆಲ್ಲ
ಒಡನೆ ತನ್ನಯ ಪುರಕೆ ಹೊಡೆತಂದ ಧೀರನ
ಒಡೆಯನ ತೋರೆನಗೆ ||3||

ಸುರರ ವಾದ್ಯದ ಪೆಸರವನ ಬಸುರಲಿ ಬಂದ
ಉರಗನತ್ತೆಯ ಮಗನ
ಹಿರಿಯ ತಮ್ಮನ ಸುತ್ತಿ ನುಂಗದೆ ತಂದೆಯ
ಮರಳಿ ನುಂಗಿದ ಧೀರನ
ಧುರದೊಳು ಧ್ವಜವ ಕೀಲಿಸಿದಾತನ ಕು
ವರರೆಲ್ಲರನು ಕೊಂದನ
ವರಮಾತೆಯ ಕೂಡೆ ಜನಿಸಿದ ಧೀರನ
ಗರುವೆ ನೀ ತೋರೆನಗೆ ||4||

ಮೂರು ಬಟೆಯೊಳಿಪ್ಪ ನಾರಿಯ ಗಂಡನ
ವೈರಿಯ ಹಿರಿಯಣ್ಣನ
ಮೂರೊಂದು ಮಾತಿನ ಸಾರವನೇ ಕದ್ದು
ವಾರಿಧಿಯ ಪೊಕ್ಕನ
ಬೇರೊಂದು ರೂಪದಿ ಜನಿಸಿ ಖಳನ ಕೊಂದು
ಧಾರಿಣಿಸುರರಿಗಿತ್ತನ
ಧೀರ ಕಾಗಿನೆಲೆಯಾದಿಕೇಶವ ರಘು
ವೀರನ ಕರೆದು ತೋರೆ ||5||