ಏನಿದೆತ್ತಣ ಬಯಕೆ ಎಲೊ

Category: ವೈರಾಗ್ಯ

Author: ಕನಕದಾಸ

ಏನಿದೆತ್ತಣ ಬಯಕೆ ಎಲೊ ಮಂಕುಜೀವ
ನೀನು ಅರಿತರೆ ಪೇಳು ನಿಜವನೆನಗೆ ||ಪ||

ಎಂಟೆರಡು ಮಾರುತರು ಎಡೆಎಡೆಗೆ ಬರುತಿರಲು
ನಂಟರೈವರು ಕೂಡಿ ಆಕ್ರಮಿಸುತಿಹರು
ದಾಂಟುವುದು ಅಸದಳವೊ ಎರಡೊಂದು ಬಲೆಗಳಲಿ
ಕಂಟಕದಿ ಬಲು ತಾಪದಿಂದ ಬಳಲುವರು ||1||

ಆರೆರಡು ದಂತಿಗಳು ದಾರಿಯೊಳು ನಿಂತಿಹವು
ಆರು ಮೂರು ತುರಗಗಳು ದಾರಿಯನು ಕೊಡವು
ಮೂರೆರಡನೀಡಾಡಿ ತೋರುವುದು ಎನ್ನಾಣೆ
ಸಾರಿ ಏನೇನಹುದು ಎಂಬುದನು ನೋಡು ||2||

ಪರರನ್ನು ನಿಂದಿಸದೆ ಪರಯೋಗ್ಯ ನೀನಾಗಿ
ಪರರ ಪಾಪಗಳ ನೀ ಕಟ್ಟಿಕೊಳದೆ
ಪರಮಾತ್ಮ ಕಾಗಿನೆಲೆಯಾದಿಕೇಶವರಾಯ
ಪರಹಿತಕೆ ಸಖನೆಂದು ಭಜಿಸೆಲೊ ಮನುಜ ||3||