ಏನು ಇಲ್ಲದ ಎರಡು ದಿನದ ಸಂಸಾರ

Category: ಇತರೆ

Author: ಕನಕದಾಸ

ಏನು ಇಲ್ಲದ ಎರಡು ದಿನದ ಸಂಸಾರ
ಜ್ಞಾನದಲಿ ದಾನಧರ್ಮವ ಮಾಡಿರಯ್ಯ ||ಪ||

ಹಸಿದು ಬಂದವರಿಗೆ ಅಶನವೀಯಲು ಬೇಕು
ಶಿಶುವಿಗೆ ಪಾಲ್ಬೆಣ್ಣೆಯನುಣಿಸಬೇಕು
ಹಸನಾದ ಭೂಮಿಯನು ದಾರೆಯೆರೆಯಲು ಬೇಕು
ಪುಸಿಯಾಡದಲೆ ಭಾಷೆ ನಡೆಸಲೇ ಬೇಕು ||1||

ಕಳ್ಳತನಗಳ ಮಾಡಿ ಒಡಲ ಹೊರೆಯಲು ಬೇಡ
ಕುಳ್ಳಿರ್ದ ಸಭೆಯೊಳಗೆ ಕುತ್ಸಿತವು ಬೇಡ
ಒಳ್ಳೆಯವ ನಾನೆಂದು ಬಲು ಹೆಮ್ಮೆ ಪಡಬೇಡ
ಬಾಳ್ವೆ ಸ್ಥಿರವೆಂದು ನೀ ನಂಬಿ ಕೆಡಬೇಡ ||2||

ದೊರೆತನವು ಬಂದಾಗ ಕೆಟ್ಟುದ ನುಡಿಯಬೇಡ
ಸಿರಿ ಬಂದ ಕಾಲಕ್ಕೆ ಬಲು ಮೆರೆಯಬೇಡ
ಸಿರಿವಂತ ಶ್ರೀ ಕಾಗಿನೆಲೆಯಾದಿಕೇಶವನ
ಚರಣ ಕಮಲವ ಸೇರಿ ಸುಖಿಯಾಗು ಮನುಜ ||3||