ಏನು ಕಾರಣ ಬಾಯಿ ತೆರದಿ- ಪೇಳೆಲೊ
Category: ಶ್ರೀನರಸಿಂಹ
Author: ಕನಕದಾಸ
ಏನು ಕಾರಣ ಬಾಯಿ ತೆರದಿ- ಪೇಳೆಲೊ
ದಾನವಾಂತಕ ಅಹೋಬಲ ನಾರಸಿಂಹನೆ ||ಪ||
ನಿಗಮ ಚೋರನ ಕೊಲಲು ತೆರೆದೆಯೋ ಈ ಬಾಯ
ನಗವ ಬೆನ್ನಲಿ ಹೊತ್ತು ನಡುಗಿ ತೆರೆದೆಯೊ ಬಾಯ- ಭೂ
ಮಿಗಳ್ಳನ ಕೊಂದು ಬಳಲಿ ತೆರೆದೆಯೊ ಬಾಯ
ಜಗವರಿಯೆ ಪೇರುರವಿರಿದ ಪ್ರಹ್ಲಾದ ವರದ
ಅಹೋಬಲ ನಾರಸಿಂಹನೆ ||1||
ಬಲಿಯ ದಾನವ ಬೇಡಲೆಂದು ತೆರೆದೆಯೊ ಬಾಯ
ಛಲದಿಂದ ಕ್ಷತ್ರಿಯರ ಕೊಲಲು ತೆರೆದೆಯೊ ಬಾಯ
ಕುಲಸತಿಯ ಅರಸಿ ಕಾಣದೆ ತೆರೆದೆಯೊ ಬಾಯ
ಮಲೆತು ಮಾವನ ಕೊಂದು ನಿಂದೆ- ಇಂಥ
ಇಳಿಯಬಾರದ ಭೂಮಿಗಿಳಿದ ನಾರಸಿಂಹ ||2||
ನಾರಿಯರ ಚೆಲ್ವಿಕೆಯ ನೋಡಿ ತೆರೆದೆಯೊ ಬಾಯ
ಏರಿ ಅಶ್ವವ ಮೆಟ್ಟಿ ಅಳಲಿ ತೆರೆದೆಯೊ ಬಾಯ
ಮಾರಪಿತ ಕಾಗಿನೆಲೆಯಾದಿಕೇಶವ ರಂಗ
ಧೀರ ಶ್ರೀನಾಥ ಭವನಾಶ ಪೇಳೋ ಪೇಳು
ಏತಕೆ ಅಹೋಬಲ ನರಸಿಂಹನೆ? ||3||