ಏನು ಮಾಡಲಯ್ಯ
Category: ವೈರಾಗ್ಯ
Author: ಕನಕದಾಸ
ಏನು ಮಾಡಲಯ್ಯ ಬಯಲಾಸೆ ಬಿಡದು ||ಪ||
ಮಾನವ ಮೃಗೇಂದ್ರ ರಾಮಚಂದ್ರ ರಕ್ಷಿಸಯ್ಯ ||ಅ||
ಜ್ಯೋತಿರ್ಮಯವಾದ ದೀಪದ ಬೆಳಕಿಗೆ ತಾನು
ಕಾತರಿಸಿ ಬೀಳುವ ಪತಂಗದಂದದಲಿ
ಧಾತುಗೆಟ್ಟು ಬೆಳ್ಳಿ ಬಂಗಾರದಲಿ ಮೆರೆವ
ಧೂರ್ತೆಯರ ನೋಡುವೀ ಚಕ್ಷುರಿಂದ್ರಿಯಕೆ ||1||
ಅಂದವಹ ಸಂಪಗೆಯ ಅರಳ ಪರಿಮಳವುಂಡು
ಮುಂದುವರಿಯದೆ ಬೀಳ್ವ ಮಧುಪನಂತೆ
ಸಿಂಧೂರ ಗಮನೆಯರ ಸಿರಿಮುಡಿಯೊಳಿಪ್ಪ ಪೂ
ಗಂಧ ವಾಸಿಸುವ ಘ್ರಾಣೇಂದ್ರಿಯಕೆ ||2||
ಗಾಣದ ತುದಿಯೊಳಿಪ್ಪ ಭೂನಾಗನಂ ಕಂಡು
ಪ್ರಾಣಾಹುತಿಯೆಂದು ಸವಿವ ಮೀನಿನಂತೆ
ಏಣಾಕ್ಷಿಯರ ಚೆಂದುಟಿಯ ಸವಿಯ ಸವಿಸವಿದು
ಜಾಣತನದಲಿ ನಲಿವ ಜಿಹ್ವೇಂದ್ರಿಯಕೆ ||3||
ದಿಮ್ಮಿ ದಿಮ್ಮಿ ಘಣಘಣಾ ಎಂಬ ಘಂಟೆಯ ರವಕೆ
ಜುಮುಜುಮನೆ ಬೆಮೆಗೊಳ್ಳುವ ಹರಿಣದಂತೆ
ರಮಣಿಯರ ರಂಜಕದ ನುಡಿಗಳನು ಕೇಳಿ ಪ್ರ
ಣಮವೆಂದು ತೋಷಿಸುವ ಕರ್ಣೇಂದ್ರಿಯಕೆ ||4||
ತ್ವಕ್ಕು ಮೊದಲಾದ ಪಂಚೇಂದ್ರಿಯಗಳೊಳು ಸಿಕ್ಕಿ
ಕಕ್ಕುಲಿತೆಗೊಂಬುದಿದ ನೀನು ಬಿಡಿಸೊ
ಸಿಕ್ಕಸದಿರು ಸಿಕ್ಕಿಗೆ ಆದಿಕೇಶವರಾಯ
ದಿಕ್ಕಾಗಿ ನಿನ್ನಂಘ್ರಿಯೊಳೆನ್ನ ಮನವನಿರಿಸೊ ||5||