ಏನೆಂದು ಕೊಂಡಾಡಿ ಸ್ತುತಿಸಲೋ

Category: ಶ್ರೀಕೃಷ್ಣ

Author: ಕನಕದಾಸ

ಏನೆಂದು ಕೊಂಡಾಡಿ ಸ್ತುತಿಸಲೋ ದೇವ
ನಾನೇನು ಬಲ್ಲೆ ನಿನ್ನ ಮಹಿಮೆಗಳ ಮಾಧವ ||ಪ||

ಹರಿಮುಕುಂದನು ನೀನು ನರಜನ್ಮ ಹುಳು ನಾನು
ಪರಮಾತ್ಮನು ನೀನು ಪಾಮರನು ನಾನು
ಗರುಡ ಗಮನನು ನೀನು ಮರುಳು ಪಾಪಿಯು ನಾನು
ಪರಂಜ್ಯೋತಿಯು ನೀನು ದುರುಳ ತಿರುಕನು ನಾನು ||1||

ವಾರಿಧಿಶಯನನಾದ ಕಾರುಣ್ಯನಿಧಿ ನೀನು
ಘೋರದಿಂದಿಹ ಕಾಮಿಕ್ರೋಧಿ ನಾನು
ಈರೇಳು ಭುವನದೊಳು ಇರುವ ಮೂರುತಿ ನೀನು
ದೂರಿ ನಿನ್ನನು ಬಯ್ವ ದುಷ್ಟ ನಾನು ||2||

ಅಣುರೇಣು ತೃಣಗಳಲಿ ಪರಿಪೂರ್ಣನು ನೀನು
ಕ್ಷಣಕ್ಷಣಕೆ ಅವಗುಣದ ಕುಕರ್ಮಿ ನಾನು
ವಾಣಿಯರಸನ ಪೆತ್ತ ವೈಕುಂಠಪತಿ ನೀನು
ಕ್ಷಣಭಂಗುರ ತನುವಿನ ಗೊಂಬೆ ನಾನು ||3||

ಕಂಬದಲಿ ಬಂದ ಆನಂದ ಮೂರುತಿ ನೀನು
ನಂಬಿಕೆಯಿಲ್ಲದ ಪ್ರಪಂಚಕನು ನಾನು
ಅಂಬರೀಷಗೆ ಒಲಿದ ಅಕ್ರೂರಸಖ ನೀನು
ಡಂಬ ಕರ್ಮಿಯು ನಾನು ನಿರ್ಜಿತನು ನೀನು ||4||

ತಿರುಪತಿಯ ವಾಸ ಶ್ರೀ ವೆಂಕಟೇಶನೆ ನಿನ್ನ
ಚರಣಸೇವಕರ ಸೇವಕನು ನಾನು
ಬಿರುದುಳ್ಳವನು ನೀನು ಮೊರೆಹೊಕ್ಕವನು ನಾನು
ಸಿರಿ ಕಾಗಿನೆಲೆಯಾದಿಕೇಶವನು ನೀನು ||5||