ಏನೆಂದು ನುಡಿವೆ ನಿನ್ನವರಂತೆ

Category: ಶ್ರೀಕೃಷ್ಣ

Author: ಕನಕದಾಸ

ಏನೆಂದು ನುಡಿವೆ ನಿನ್ನವರಂತೆ ಕೇಡು ಬುದ್ಧಿ ಎನ್ನೊಳಗಿಲ್ಲ- ಗುಣ
ಹೀನರಲ್ಲದ ಈ ನರರ ಪಾಲಿಪ ಬುದ್ಧಿ ನಿನ್ನೊಳಗಿಲ್ಲ ||ಪ||

ತರಳ ಪ್ರಹ್ಲಾದನಂದದಿ ನಿನ್ನ ರೂಪನು ಕೆಡಿಸಲಿಲ್ಲ
ನರನಂತೆ ಬಂಡಿ ಬೋವನ ಮಾಡಿ ನಿನ್ನ ದುಡಿಸಲಿಲ್ಲ
ಪರಾಶರನಂತೆ ನದಿಯೊಳಿದ್ದ ಹೆಣ್ಣ ಕೂಡಲಿಲ್ಲ
ಗರುಡನಂದದಿ ನಿನ್ನ ಪೊತ್ತು ತಿರುಗಲಿಲ್ಲ ||1||

ಸನಕಾದಿ ಮುನಿಯಂತೆ ವನದೊಳು ಅನುದಿನ ಚರಿಸಲಿಲ್ಲ
ಬಿನುಗು ಬೇಡತಿಯಂತೆ ಸವಿದುಂಡ ಹಣ್ಣ ತಿನಿಸಲಿಲ್ಲ
ಇನಕುಲ ಕಪಿಯಂತೆ ವಂಚಿಸಿ ವಾಲಿಯ ಕೊಲಿಸಲಿಲ್ಲ
ಘನ ಪಾತಕದಜಮಿಳನಂತೆ ನಾರಗ ಎನ್ನಲಿಲ್ಲ ||2||

ಕದನದೊಳು ವಿಭೀಷಣನಂತೆ ಅಣ್ಣನ ಕೊಲಿಸಲಿಲ್ಲ
ವಿದುರನ ತೆರನಂತೆ ಸದನವ ಮುರಿದು ನಿನ್ನ ಬೆರೆಯಲಿಲ್ಲ
ಮದಗಜದಂತೆ ಮಕರಿಗೆ ಸಿಲ್ಕಿ ಒರಲಲಿಲ್ಲ
ಗದರಿ ಶಿಶುಪಾಲನಂದದಿ ನಿನ್ನನುಪೇಕ್ಷಿಸಿ ಜರೆಯಲಿಲ್ಲ ||3||

ಬುವಿಯೊಳು ಬಲಿಯಂತೆ ದಾನವ ನೀಡಲಿಲ್ಲ
ಭವನಂತೆ ಶ್ಮಶಾನದಿ ಮನೆ ಮಾಡಿ ಸ್ಮರಿಸಲಿಲ್ಲ
ತವ ಪುಂಡರೀಕನಂತೆ ಹಲಗೆಯಿಟ್ಟಿಗೆ ಮೇಲೆ ನಿಲ್ಲಿಸಲಿಲ್ಲ
ಭುವನದೊಡೆಯ ನೆಲೆಯಾದಿಕೇಶವನ ಮರೆಯಲಿಲ್ಲ ||4||