ಒಡವೆ ಹೋಯಿತು ಮನ ದೃಢವಾಯಿತು

Category: ವೈರಾಗ್ಯ

Author: ಕನಕದಾಸ

ಒಡವೆ ಹೋಯಿತು ಮನ ದೃಢವಾಯಿತು ||ಪ||
ಹಿಡಿದರೋಡುವ ಕಳ್ಳ ಬಿಡದೆ ಕದ್ದುಕೊಂಡು ಹೋದ ||ಅ||

ಆರು ಜೋಡಿನ ಓಲೆಯಿತ್ತು ಮೂರು ಮುತ್ತಿನ ಮೂಗುತಿಯಿತ್ತು
ಚಾತುತರದ ಇಪ್ಪತ್ನಾಲ್ಕೆಳೆಯ ಸರವು ಒಂದಿತ್ತು
ಈರೈದು ತಾಳಿಗಳಿತ್ತು ಬಿರುದಿನ ಕಪ್ಪೆಂಟಿತ್ತು
ದಾರಿ ನೋಡಿಕೊಂಡು ಇದ್ದ ಛಾಯನೆಂಬ ಕಳ್ಳ ಕದ್ದ ||1||

ಎಪ್ಪತ್ತೆರಡು ಸಾವಿರ ಸೂತ್ರದ ಹಸ್ತಕಟ್ಟು ಎರಡಿತ್ತು
ಕಪ್ಪು ಬಿಳುಪು ಕೆಂಪು ವರ್ಣದ ಪದಕ ಒಂದಿತ್ತು
ಒಪ್ಪವಿತ್ತ ಹಸ್ತಕಡಗ ಆಶಾಪಾಶವೆರಡಿತ್ತು
ಒಪ್ಪವನ್ನು ಸಾಧಿಸಿ ನೇತ್ರನೆಂಬ ಕಳ್ಳ ಕದ್ದ ||2||

ಹುಟ್ಟು ಸಾವು ಎರಡು ಎಂಬ ಘಟ್ಟಿ ತೂಕದ ನಗವಿತ್ತು
ಕಷ್ಟ ಸುಖ ಕರ್ಮಗಳೆಂಬ ಸಂಚಿಗಳಿತ್ತು
ಅಷ್ಟು ಇಷ್ಟು ಚಿಲ್ಲರೆ ಒಡವೆ ಪೆಟ್ಟಿಗೆಯಲಿ ತುಂಬಿತ್ತು
ದೃಷ್ಟಿ ನೋಡಿಕೊಂಡು ಇದ್ದ ಧರ್ಮನೆಂಬ ಕಳ್ಳ ಕದ್ದ ||3||

ಎಲ್ಲ ಒಡವೆ ಹೋಯಿತಾದರು ಪುಲ್ಲಳಾಗಿ ಮೆರೆಯುತಾಳೆ
ಚೆಲ್ವನೊಬ್ಬ ಪುರುಷನ ಕಂಡು ತಾಳಲಾರದೆ
ಬಲ್ಲಿದಳು ಈಕೆ ಎಂದು ಇವಳ ಬಗೆ ತಿಳಿಯಿತೆಂದು
ಕೊಲ್ಲಬಾರದೆನುತ ಹೇಳಿ ಮನೆಯ ಬಿಟ್ಟು ಹೊರಗಟ್ಟಿದ ||4||

ಇಂಥ ಒಡವೆ ಹೋಯಿತೆಂದು ಚೋದ್ಯಪಟ್ಟು ನೋಡುತಿರಲು
ತಂತ್ರ ಮಾಡಿ ಆದಿಕೇಶವ ಶ್ರೀಹರಿಯು ತಾನೆ ಬಂದು
ತಂತ್ರವನ್ನು ಹೇಳಿ ಜ್ಞಾನ ಮಾರ್ಗವನ್ನು ಬಿಟ್ಟುಕೊಟ್ಟು
ಸಂತಸದಿಂದ ಇರು ಎಂದು ಚಿಂತೆ ಬಿಡಿಸಿ ಸಲೆ ಸಲಹಿದ ||5||